ರೋಗಿಗಳ ಆರೈಕೆ ಮಾಡುತ್ತಿರುವ ಶರಣ್ಯ ಕಾರ್ಯ ಶ್ಲಾಘನೀಯ

ಸಂಜೆವಾಣಿ ವಾರ್ತೆ

ಶಿವಮೊಗ್ಗ.ಅ.೨೬: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳ ಸೇವೆ ಮಾಡುವ ಜತೆಯಲ್ಲಿ ಅಗತ್ಯ ಸೌಕರ್ಯಗಳನ್ನು ಒದಗಿಸುತ್ತಿರುವ ಶರಣ್ಯ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.ಶಿವಮೊಗ್ಗ ತಾಲೂಕಿನ ಗಾಜನೂರು ಅಗ್ರಹಾರದಲ್ಲಿರುವ ಡಿಎಸ್‌ಎಲ್ ಟ್ರಸ್ಟ್ ನ ಶರಣ್ಯ ಆರೈಕೆ ಕೇಂದ್ರ ವತಿಯಿಂದ ಆಯೋಜಿಸಿದ್ದ ಶ್ರೀ ಮಾತೆ ಚೌಡೇಶ್ವರಿ ಮತ್ತು ಶ್ರೀ ಭೂತೇಶ್ವರ ದೇವರುಗಳ ನವೀಕೃತ ದೇಗುಲದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಮಾನವೀಯ ನೆಲೆಯಲ್ಲಿ ಶರಣ್ಯ ಸಂಸ್ಥೆಯು ವಿಶೇಷ ಕಾರ್ಯ ನಡೆಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ ಎಂದು ತಿಳಿಸಿದರು.ಶಿವಮೊಗ್ಗ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿ, ಶರಣ್ಯ ಸಂಸ್ಥೆಯು ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು, ರೋಗಿಗಳ ಆರೈಕೆಯಲ್ಲಿ ವಿಶೇಷ ಕಾಳಜಿ ವಹಿಸುತ್ತಿದೆ. ರೋಗಿಗಳ ಕಷ್ಟದ ದಿನಗಳಲ್ಲಿ ಅವರಿಗೆ ಉಚಿತ ಸೇವೆ ಮಾಡುತ್ತಿರುವುದು ಅಭಿನಂದನೀಯ ಕಾರ್ಯ ಎಂದು ತಿಳಿಸಿದರು.ಶರಣ್ಯ ಆರೈಕೆ ಕೇಂದ್ರದ ಆವರಣದಲ್ಲಿ ಇರುವ ಶ್ರೀ ಮಾತೆ ಚೌಡೇಶ್ವರಿ ಮತ್ತು ಶ್ರೀ ಭೂತೇಶ್ವರ ದೇವರುಗಳ ನವೀಕೃತ ದೇಗುಲದ ಲೋಕಾರ್ಪಣೆ ಸಂದರ್ಭದ ಪ್ರಯುಕ್ತ ದುರ್ಗಾ ಹೋಮ ನಡೆಸಲಾಯಿತು.ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್ ಅವರು ವಾರ್ಡ್ ಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ವಿಡಿಯೋ ಮುಖಾಂತರ ಸಂಸ್ಥೆಯ ವಿವರ ವೀಕ್ಷಿಸಿದರು. ಎರಡು ಬಿಲ್ವಪತ್ರೆಯ ಗಿಡಗಳನ್ನು ಆವರಣದಲ್ಲಿ ನೆಡಲಾಯಿತು.ರೋ ಗಿಗಳು ಗುಣಪಡಿಸಲಾಗದೇ ಇರುವ ಉಲ್ಭಣ ಸ್ಥಿತಿಯಲ್ಲಿ ಬಂದವರಿಗೂ ಉತ್ತಮ ಶುಶ್ರೂಷೆಯ ನಂತರದಲ್ಲಿ ಗುಣಮುಖರಾದ ಅನೇಕ ಉದಾಹರಣೆ ಶರಣ್ಯ ಸಂಸ್ಥೆಯಿಂದ ಆಗಿದೆ.ಶರಣ್ಯ ಸಂಸ್ಥೆಯ ಗೌರವಾಧ್ಯಕ್ಷ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಶರಣ್ಯ ಸಂಸ್ಥೆ ಅಧ್ಯಕ್ಷ ಟಿ.ಆರ್.ಅಶ್ವತ್ಥ್ ನಾರಾಯಣ ಶೆಟ್ಟಿ, ಮ್ಯಾನೇಜಿಂಗ್ ಟ್ರಸ್ಟಿ ಡಿ.ಎಲ್.ಮಂಜುನಾಥ್, ಸಹ ಕಾರ್ಯದರ್ಶಿ ಬಿ.ಎನ್.ಮಂಜುನಾಥ್, ಸಂದೀಪ್, ಶ್ವೇತಾ ಮತ್ತಿತರರು ಉಪಸ್ಥಿತರಿದ್ದರು.