ರೋಗಿಗಳಿಗೆ ಹಾಸಿಗೆ ಸಮಸ್ಯೆಯಾಗದಂತೆ ಕ್ರಮಕ್ಕೆ ಸೂಚನೆ

ರಿಮ್ಸ್, ಓಪೆಕ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಭೇಟಿ – ಪರಿಶೀಲನೆ
ರಾಯಚೂರು.ಸೆ.೨೫- ರಿಮ್ಸ್ ಮತ್ತು ಓಪೆಕ್ ಆಸ್ಪತ್ರೆಯ ವ್ಯವಸ್ಥೆಗೆ ಸಂಬಂಧಿಸಿ ರಾಜ್ಯ ವಿಧಾನಸಭೆಯಲ್ಲಿ ಗಂಭೀರ ಚರ್ಚೆ ಮತ್ತು ಆರೋಗ್ಯ ಸಚಿವರ ಕಟ್ಟುನಿಟ್ಟಿನ ಸೂಚನೆ ನಂತರ ಇದೇ ಪ್ರಪ್ರಥಮ ಬಾರಿಗೆ ಜಿಲ್ಲಾಧಿಕಾರಿ ಡಾ.ಸತೀಶ್ ಅವರು ಉಭಯ ಆಸ್ಪತ್ರೆಗಳಿಗೆ ಭೇಟಿ ನೀಡಿ, ಅಲ್ಲಿಯ ಸ್ಥಿತಿಗತಿ ಪರಿಶೀಲಿಸಿ, ಡೆಂಗ್ಯೂ, ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗಗಳ ಚಿಕಿತ್ಸೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಡೀನ್‌ಗೆ ಸೂಚಿಸಿದರು.
ರಿಮ್ಸ್ ಆಸ್ಪತ್ರೆಯಲ್ಲಿ ಡೆಂಗ್ಯೂ ಮತ್ತಿತರ ಕಾರಣಗಳಿಗೆ ಚಿಕಿತ್ಸೆಗೆ ದಾಖಲಾದ ಮಕ್ಕಳಿಗೆ ಸಮರ್ಪಕವಾಗಿ ಹಾಸಿಗೆ ಒದಗಿಸುವಲ್ಲಿ ನಿರ್ಲಕ್ಷ್ಯೆ ವಹಿಸಿದ ಪ್ರಕರಣ ವಿಧಾನಸಭೆಯಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆ ನಂತರ ರಿಮ್ಸ್ ಆಸ್ಪತ್ರೆಯಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ. ಚಿಕಿತ್ಸೆಯ ವ್ಯವಸ್ಥೆ ಮತ್ತು ಸಾಂಕ್ರಾಮಿಕ ರೋಗಗಳಿಂದ ದಾಖಲಾದ ರೋಗಿಗಳ ಮಾಹಿತಿಯನ್ನು ಈ ಭೇಟಿಯ ಸಂದರ್ಭದಲ್ಲಿ ಅವರು ಪಡೆದರು. ಸೆ.೨೭ ರಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರು ಪ್ರಥಮ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅಂದು ಅವರು ಭೇಟಿ ನೀಡುವ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಯಿತು.
ಎರಡು ಆಸ್ಪತ್ರೆಗಳಲ್ಲಿ ಹಾಸಿಗೆಗಳ ಮಾಹಿತಿ, ಸೌಲಭ್ಯಗಳ ಸಂಪೂರ್ಣ ವರದಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಥಳೀಯ ಡೀನ್ ಅವರೊಂದಿಗೆ ಚರ್ಚಿಸಿದರು. ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆಯೂ ಆದೇಶಿಸಿದರು. ಯಾವುದೇ ಕಾರಣಕ್ಕೂ ರೋಗಿಗಳಿಗೆ ಹಾಸಿಗೆಗಳ ಕೊರತೆ ಮತ್ತು ಔಷಧೋಪಚಾರದ ವ್ಯವಸ್ಥೆಯ ಕೊರತೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಆಕ್ಸಿಜನ್ ಪ್ಲಾಂಟ್ ಪರಿಶೀಲಿಸಿ, ಮಾಹಿತಿ ಪಡೆದರು. ರಾಜ್ಯ ವಿಧಾನಸಭೆಯಲ್ಲಿ ಈ ಉಭಯ ಆಸ್ಪತ್ರೆಗಳ ಬಗ್ಗೆ ಚರ್ಚೆಯ ನಂತರ ಜಿಲ್ಲಾಧಿಕಾರಿಗಳು ಇದೇ ಮೊದಲ ಬಾರಿಗೆ ಆಸ್ಪತ್ರೆಗೆ ಭೇಟಿ ನೀಡಿರುವುದು ಈಗ ಗಮನ ಸೆಳೆದಿದೆ. ಜಿಲ್ಲೆಯಲ್ಲಿ ಡೆಂಗ್ಯೂ ತೀವ್ರವಾಗಿದ್ದರಿಂದ ಮುಂದೆ ಉಂಟಾಗಬಹುದಾದ ಸಂಕಷ್ಟಗಳಿಗೆ ಈ ಎಲ್ಲಾ ಸಿದ್ಧತೆಗಳಿಗೆ ಈ ಭೇಟಿ ಮಹತ್ವದ್ದು ಎನಿಸಿದೆ.
ಈ ಸಂದರ್ಭದಲ್ಲಿ ರಿಮ್ಸ್ ಡೀನ್ ಡಾ.ಬಸವರಾಜ ಪೀರಾಪೂರು, ಆಡಳಿತ ಮಂಡಳಿ ಸದಸ್ಯರಾದ ರಾಜೇಂದ್ರ ಶಿವಾಳೆ, ಡಾ.ಗದ್ವಾಲ್ ನಾಗರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.