ರೋಗಿಗಳನ್ನು ಸರಕಾರಿ ಆಸ್ಪತ್ರೆಗಳಿಗೆ ಶಿಪಾರಸ್ಸು ಮಾಡಿ:ಬಿ ಸಿ ಪಾಟೀಲ್

ಕೊಪ್ಪಳ, ಮೇ.28: ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ವೈದ್ಯರು ಜ್ವರ, ಶೀತ, ಕೆಮ್ಮು ಎಂದು ಬರುವ ಕೋವಿಡ್ ಲಕ್ಷಣಗಳುಳ್ಳ ರೋಗಿಗಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹೋಗಿ ಕೋವಿಡ್ ಪರೀಕ್ಷೆಗೆ
ಒಳಗಾಗುವಂತೆ ಶಿಫಾರಸ್ಸು ಮಾಡಲು ಸೂಚನೆ ನೀಡಿ ಎಂದು ಕರ್ನಾಟಕ ಸರ್ಕಾರದ ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಅವರು, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಜಿಲ್ಲೆಯಲ್ಲಿ ಕೋವಿಡ್-೧೯ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮಗಳಲ್ಲಿ ಖಾಸಗಿ ವೈದ್ಯರು ಕೋವಿಡ್ ಲಕ್ಷಣಗಳುಳ್ಳ ರೋಗಿಗಳಿಗೆ ತಾತ್ಕಾಲಿಕ ಔಷಧೋಪಚಾರ ಮಾಡುವುದರಿಂದ ರೋಗಿಗಳು ಗುಣಮುಖರಾಗದೆ, ಗಂಭೀರ ಹಂತ ತಲುಪಿದ ಮೇಲೆ ಜಿಲ್ಲಾಸ್ಪತ್ರೆಗೆ ದಾಖಲಾಗುತ್ತಾರೆ. ರೋಗಿಯ ಪ್ರಾಣಕ್ಕೆ ಅಪಾಯವಾಗುವುದರ ಜೊತೆಗೆ ಕೋವಿಡ್ ಪಾಸಿಟಿವ್ ಇದ್ದಲ್ಲಿ ಅದುವರೆಗೆ ಆ ರೋಗಿ ಬಹಳಷ್ಟು ಜನರಿಗೆ ಸೋಂಕು ಹರಡಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕೋವಿಡ್ ಲಕ್ಷಣಗಳುಳ್ಳ ಯಾವುದೇ ರೋಗಿಯನ್ನು ಸರ್ಕಾರಿ ಆಸ್ಪತ್ರೆಗೆ ಶಿಫಾರಸ್ಸು ಮಾಡುವಂತೆ ಜಿಲ್ಲೆಯ ಎಲ್ಲ ಗ್ರಾಮಗಳ ಖಾಸಗಿ ವೈದ್ಯರಿಗೆ ಅಗತ್ಯ ಸೂಚನೆ ನೀಡಿ. ಡಿಎಚ್‌ಒ ಒಳಗೊಂಡು ಜಿಲ್ಲೆಯ ಎಲ್ಲ ಖಾಸಗಿ ಮತ್ತು ಸರ್ಕಾರಿ ವೈದ್ಯರ ವಾಟ್ಸಪ್ ಗ್ರೂಪ್ ರಚಿಸಿ ಅದರಲ್ಲಿ ರೋಗಿಯ ಕುರಿತ ಮಾಹಿತಿಯನ್ನು ನೀಡಲು ತಿಳಿಸಿ ಎಂದು ಅವರು ಹೇಳಿದರು.
ಹೋಂ ಐಸೋಲೇಷನ್‌ನಲ್ಲಿರುವ ಎಲ್ಲ ಸೋಂಕಿತರನ್ನು ಕೋವಿಡ್ ಆಸ್ಪತ್ರೆ, ಕಾಳಜಿ ಕೇಂದ್ರಗಳಿಗೆ ದಾಖಲಿಸಿ. ಮುಖ್ಯವಾಗಿ ಕೋವಿಡ್ ಸೋಂಕಿತ ವಯೋವೃದ್ಧರಿಗೆ ಹೆಚ್ಚಿನ ಆರೈಕೆ ಹಾಗೂ ಚಿಕಿತ್ಸೆಯ ಅಗತ್ಯವಿರುವುದರಿಂದ ಮತ್ತು ಮನೆಯಲ್ಲಿ ಅವರ ಆರೈಕೆಗೆ ಮನೆಯ ಸದಸ್ಯರು.ಅವಲಂಬಿಸಬೇಕಾಗಿರುವುದರಿಂದ ಸೋಂಕು ಮನೆಯ ಇತರೆ ಸದಸ್ಯರಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಅಂತವರನ್ನು ಕೂಡಲೇ ಕಾಳಜಿ ಕೇಂದ್ರ, ಆಸ್ಪತ್ರೆಗಳಿಗೆ ದಾಖಲಿಸಿ. ಹೋಂ ಐಸೋಲೇಷನ್ ಶಿಫಾರಿತ ಕ್ರಮವಲ್ಲವಾದ್ದರಿಂದ ಯಾವುದೇ ವಯೋಮಾನದ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಎಂದು ಅವರು ಸೂಚನೆ ನೀಡಿದರು.ಕೋವಿಡ್ ನಿಯಂತ್ರಣ ಕ್ರಮಗಳಲ್ಲಿ ಸಂಖ್ಯೆಯಾಧಾರಿತ ಪರಿಣಾಮಕ್ಕಿಂತ ಗುಣಮಟ್ಟದ ಪರಿಣಾಮದ ಅಗತ್ಯವಿದೆ. ಸೋಂಕು ಹರಡುವಿಕೆ ನಿಯಂತ್ರಣ ಹಾಗೂ ಸೋಂಕಿತರ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ. ರೋಗಿಗೆ ಸರಿಯಾದ ಸಮಯಕ್ಕೆ ಅಗತ್ಯ ಚಿಕಿತ್ಸೆ ನೀಡಬೇಕು. ಜಿಲ್ಲೆಯಲ್ಲಿ ಇದುವರೆಗೂ ೬ ಬ್ಲಾಕ್ ಫಂಗಸ್ ಪ್ರಕರಣಗಳು ದಾಖಲಾಗಿದ್ದು, ಅವರಲ್ಲಿ ಇಬ್ಬರು ಮೃತ ಪಟ್ಟಿದ್ದಾರೆ. ಬ್ಲಾಕ್ ಫಂಗಸ್ ಚಿಕಿತ್ಸೆಗೆ ಬೇಕಾದ ಎಲ್ಲ ಔಷಧಿಗಳನ್ನು ಮುಂಜಾಗ್ರತಾ ಕ್ರಮವಾಗಿ ದಾಸ್ತಾನೀಕರಿಸಿ. ಕೋವಿಡ್, ಆಕ್ಸಿಜನ್ ಯುಕ್ತ ಬೆಡ್‌ಗಳ ಕೊರತೆಯಿಂದ ರೋಗಿಗಳು ಆಸ್ಪತ್ರೆಯ ಹೊರಗೆ ಕಾಯುವ ಕುರಿತು ದೂರುಗಳು ಕೇಳಿ ಬಂದಿವೆಆದ್ದರಿಂದ ಯಾವುದೇ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್ ಲಭ್ಯತೆ ಕುರಿತು ತಕ್ಷಣದ ಮಾಹಿತಿ ಒದಗಿಸಲು ನೋಡಲ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಯಾವುದೇ ಭಾಗದ
ರೋಗಿಗೆ ಇನ್ಯಾವುದೇ ಭಾಗದ ಆಸ್ಪತ್ರೆಯ ಬೆಡ್ ಒದಗಿಸಲು ಹಾಗೂ ಆ ಆಸ್ಪತ್ರಗೆ ರೋಗಿಯನ್ನು ಕಳುಹಿಸಲು ಅಂಬುಲೆನ್ಸ್ ಅಥವಾ ಇತರೆ ವಾಹನದವ್ಯವಸ್ಥೆ ಕಲ್ಪಿಸಬೇಕು. ಜಿಲ್ಲೆಯ ಉದ್ಯಮದಾರರಿಂದ
೨೦೦ ಬೆಡ್‌ನ ಕೋವಿಡ್ ಆಸ್ಪತ್ರೆ ನಿರ್ಮಿಸುವ ಯೋಜನೆ ಇದ್ದು, ಈ ಕುರಿತು ಚರ್ಚಿಸಿ ಕ್ರಮ
ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಜಿಲ್ಲೆಯ ಬಹುತೇಕ ಔಷಧ ಅಂಗಡಿಗಳಲ್ಲಿ ಜ್ವರ, ಶೀತದಂತ ಕೋವಿಡ್ ಲಕ್ಷಣಗಳುಳ್ಳ ರೋಗಿಗಳಿಗೆ ವೈದ್ಯರ ಶಿಫಾರಸ್ಸು ಇಲ್ಲದೆ ಮಾತ್ರೆಗಳನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಜಿಲ್ಲಾ ಔಷಧ ನಿಯಂತ್ರಕ ಅಧಿಕಾರಿಗಳು ಅಂತಹ ಔಷಧ ಅಂಗಡಿಗಳನ್ನು ಗುರುತಿಸಿ ಅವರಿಗೆಸೂಕ್ತ ಸೂಚನೆ ನೀಡಬೇಕು. ವೈದ್ಯರ ಶಿಫಾರಸ್ಸು ಇಲ್ಲದೆ ಜ್ವರಕ್ಕೆ ಸಂಬಂಧಿಸಿದ ಯಾವುದೇ ಮಾತ್ರೆಯನ್ನು ಯಾವುದೇ ಔಷಧ ಅಂಗಡಿಯವರು
ನೀಡಬಾರದು ಎಂದು ಆದೇಶ ಹೊರಡಿಸಿ ಎಂದು ಅವರು ಸೂಚಿಸಿದರು.ಕೋವಿಡ್-೧೯ ಮೂರನೇಅಲೆಯ ಕುರಿತು ತಜ್ಞರು ಈಗಾಗಲೇ ಸೂಚನೆ ನೀಡಿದ್ದಾರೆ. ಅದು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ
ಎಂದು ಕೂಡ ಅವರು ತಿಳಿಸಿದ್ದಾರೆ. ಆದ್ದರಿಂದಜಿಲ್ಲೆಯ ಎಲ್ಲ ಶಾಲಾ ಶಿಕ್ಷಕರು ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಶಾಲೆಗೆ ಕಡ್ಡಾಯವಾಗಿ ಹಾಜರಿ ಹಾಕಿ, ಗ್ರಾಮದ ಎಲ್ಲ ಮನೆ ಮನೆಗೆ ಭೇಟಿ ನೀಡಿ ಕೋವಿಡ್-೧೯ ಮೂರನೇ ಅಲೆಯ ಬಗ್ಗೆ ಹಾಗೂ ಮಕ್ಕಳು ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಸೂಚನೆ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಿದರು.
ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ವ್ಯವಸ್ಥೆ ಇದೆ. ಆದರೆ ವೆಂಟಿಲೇಟರ್‌ಗಳಿಗೆ ಪರ್ಯಾಯವಾಗಿ ಆಕ್ಸಿಜನ್ ಹಾಗು ವೆಂಟಿಲೇಟರ್ ವ್ಯವಸ್ಥೆಯುಳ್ಳ ಬೈ ಪ್ಯಾಕ್‌ಗಳನ್ನು ಖರೀದಿಸಿ ಎಲ್ಲ ಕೋವಿಡ್
ಆಸ್ಪತ್ರೆಗಳಿಗೆ ೫ ರಂತೆ ಒದಗಿಸಿ. ಇದರ ನಿರ್ವಹಣೆ ಕೂಡ ಸುಲಭವಾಗಿದ್ದು, ಹೆಚ್ಚಿನ ರೋಗಿಗಳಿಗೆ ಇನ್ನೂ ಉತ್ತಮ ಸೌಲಭ್ಯ ಒದಗಿಸಬಹುದು ಎಂದು ಅವರು ಹೇಳಿದರು.