ರೋಗಮುಕ್ತ ಸಮಾಜಕ್ಕೆ ಯೋಗ ಅತ್ಯವಶ್ಯ

ಹುಳಿಯಾರು, ಜೂ. ೨೪- ರೋಗಮುಕ್ತ ಸಮಾಜಕ್ಕೆ ಯೋಗ ಅವಶ್ಯವಾಗಿದ್ದು ಯೋಗ ಮತ್ತು ಧ್ಯಾನ ಮಾಡುವುದರಿಂದ ಒತ್ತಡ ನಿವಾರಿಸಿಕೊಂಡು ಶಾಂತಿ, ನೆಮ್ಮದಿ ಕಂಡುಕೊಳ್ಳಬಹುದು ಎಂದು ಯೋಗ ಶಿಕ್ಷಕ ಟಿ.ಎಸ್.ರವೀಂದ್ರ ಹೇಳಿದರು.
ಹುಳಿಯಾರಿನ ವಾಸವಿ ಶಾಲೆಯಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸಿ ಅವರು ಮಾತನಾಡಿದರು.
ಆರೋಗ್ಯಪೂರ್ಣ ಜೀವನಕ್ಕೆ ಯೋಗ ದಿವ್ಯೌಷಧಿ. ನಮ್ಮ ಸಂಸ್ಕೃತಿಯ ಬೇರುಗಳಿರುವುದು ಯೋಗದಲ್ಲಿಯೇ. ವಿಶ್ವಕ್ಕೆ ಭಾರತ ಕೊಟ್ಟ ಬಹುದೊಡ್ಡ ಕೊಡುಗೆ ಯೋಗ. ನಮ್ಮ ಋಷಿಮುನಿಗಳು ಯೋಗವನ್ನು ಸಂಸ್ಕೃತಿಯ ಭಾಗವಾಗಿ ನೋಡಿದರು, ಆರಾಧಿಸಿದರು. ಸರ್ವ ರೋಗಗಳಿಗೂ ಯೋಗ ಒಂದು ಮಂತ್ರವೆಂದು ಗುರುತಿಸಿದರು. ಅದು ಕೇವಲ ಶಾರೀರಕ ಮಾತ್ರವಲ್ಲ ನಮ್ಮ ಮಾನಸಿಕ ಆರೋಗ್ಯದ ಬುನಾದಿಯೆಂದು ಅರಿವು ಮೂಡಿಸಿದರು.
ಆಡಳಿತಾಧಿಕಾರಿ ಎಲ್.ಆರ್.ಚಂದ್ರಶೇಖರ್ ಮಾತನಾಡಿ, ನಮ್ಮ ದೇಶದ ಯೋಗಕ್ಕೆ ೬ ಸಾವಿರ ವರ್ಷಗಳ ಇತಿಹಾಸವಿದೆ. ಪ್ರಾಚೀನ ಪದ್ಧತಿಯಾದ ಯೋಗವು ಇದೀಗ ವಿಶ್ವಕ್ಕೆ ವಿಸ್ತರಿಸಿದೆ. ಯೋಗದಿಂದ ರಕ್ತಪರಿಚಲನೆ, ಜೀರ್ಣಕ್ರಿಯೆ ಸರಾಗವಾಗಿ ದೈಹಿಕ ಸ್ಥಿತಿಗತಿ ಉತ್ತಮವಾಗುತ್ತದೆ. ಒತ್ತಡದ ಜೀವನಶೈಲಿಯಿಂದ ಪಾರಾಗಿ, ಮಾನಸಿಕ ನೆಮ್ಮದಿ ಪಡೆಯಲು ಹಾಗೂ ಉತ್ತಮ ನಿದ್ರೆಗೆ ಯೋಗ ಸಹಕಾರಿ ಎಂದರು.
ಈ ಸಂದರ್ಭದಲ್ಲಿ ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಎಲ್.ಬಾಲೇಶ್, ಕಾರ್ಯದರ್ಶಿ ಎಲ್.ಆರ್.ಬಾಲಾಜಿ, ಸಹ ಕಾರ್ಯದರ್ಶಿ ನಾಗರಾಜು, ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.