ರೋಗದ ಗುಣಲಕ್ಷಣಗಳ ಅರಿತು ಚಿಕಿತ್ಸೆ ನೀಡಬೇಕು

ಕೋಲಾರ,ಜು.೬:ನಾನು ಪಾರಂಪರಿಕ ವೈದ್ಯ ಎಲ್ಲವನ್ನು ತಿಳಿದಿದ್ದೇನೆ ಎಂಬ ಹಂಬಲ ಬೇಡ ತಿಳಿಯಬೇಕಾದ ಬೆಟ್ಟದಷ್ಟಿದೆ ಎಂಬುದನ್ನು ಮನಗಾಣಬೇಕೆಂದು ಪಾರಂಪರಿಕ ವೈದ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಜಿ.ಮಹಾದೇವಯ್ಯ ವೈದ್ಯರುಗಳಿಗೆ ಸಲಹೆ ನೀಡಿದರು.
ಪಾರಂಪರಿಕ ವೈದ್ಯ ಪರಿಷತ್ ಕರ್ನಾಟಕ ವತಿಯಿಂದ ನಗರದ ಗೌರಿ ಪೇಟೆಯ ಶ್ರೀ ಬಯಲು ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯ ಪಾರಂಪರಿಕ ವೈದ್ಯರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿ, ನಮ್ಮ ಪಾರಂಪರಿಕ ವೈದ್ಯರುಗಳು ರೋಗಿಗೆ ಚಿಕಿತ್ಸೆ ನೀಡುವ ಮೊದಲು ರೋಗದ ಗುಣಲಕ್ಷಣಗಳ ಬಗ್ಗೆ ಮೊದಲು ತಾವು ಅರಿತುಕೊಂಡು ರೋಗದ ಮೂಲವನ್ನು ಹುಡುಕಿ ನಂತರ ರೋಗಿಗೆ ಚಿಕಿತ್ಸೆ ನೀಡಿದಾಗ ಮಾತ್ರ ಚಿಕಿತ್ಸೆ ಫಲಕಾರಿಯಾಗಿ ರೋಗ ಸಂಪೂರ್ಣ ನಿವಾರಣೆಯಾಗುತ್ತದೆ ಎಂದರು.
ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಅನುಗನಳು ಕೃಷ್ಣಮೂರ್ತಿ ಮಾತನಾಡಿ, ಪಾರಂಪರಿಕ ವೈದ್ಯ ಪರಿಷತ್ತಿನ ನಿಯಮಾವಳಿಗಳನ್ನು ತಿಳಿಸುತ್ತಾ ಗ್ರಾಮೀಣ ಮಟ್ಟದಲ್ಲಿ ಇಂದಿಗೂ ಕೂಡ ನಿಸ್ವಾರ್ಥದಿಂದ ಚಿಕಿತ್ಸೆ ನೀಡುತ್ತಿರುವ ನಮ್ಮ ಪಾರಂಪರಿಕ ವೈದ್ಯರುಗಳು ಇದ್ದಾರೆ ಅವರುಗಳನ್ನು ಗುರುತಿಸುವ ಕೆಲಸ ಮಾಡಬೇಕಾಗಿದೆ. ಆದ್ದರಿಂದ ರಾಜ್ಯದ ಪ್ರತಿಯೊಂದು ತಾಲೂಕು ಮಟ್ಟದಲ್ಲಿ ೧೧ ಜನ ಪಾರಂಪರಿಕ ವೈದ್ಯರುಗಳನ್ನು ಒಳಗೊಂಡ ಸಮಿತಿ ರಚಿಸಿ ರಾಜ್ಯ ಪರಿಷತ್ ವತಿಯಿಂದ ಇಂತಹ ವೈದ್ಯರುಗಳನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ, ಪ್ರತಿಯೊಂದು ತಾಲೂಕಿನಿಂದಲೂ ಆಯ್ಕೆಯಾಗುವ ಸಂಚಾಲಕರುಗಳು ಸೇರಿ ಒಬ್ಬರು ಜಿಲ್ಲಾ ಸಂಚಾಲಕರನ್ನು ಆಯ್ಕೆ ಮಾಡಿ ರಾಜ್ಯ ಸಮಿತಿಗೆ ಕಳಿಸಿದರೆ ಅವರ ಮೂಲಕ ಪರಿಷತ್ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು
ಜಿಲ್ಲೆಗಳ ಜಿಲ್ಲಾ ಸಂಚಾಲಕರುಗಳು ಸೇರಿ ೧೧ ಜನ ಸಮಿತಿ ರಚಿಸಿ ರಾಜ್ಯ ಕಾರ್ಯ ಸಮಿತಿ ರಚನೆಯಾಗುತ್ತದೆ ಎಂದರು. ಈ ಸಮಿತಿಯ ಕಾರ್ಯಾವಧಿ ಮೂರು ವರ್ಷಗಳಾಗಿದ್ದು ನಂತರ ಹೊಸ ಕಾರ್ಯಕಾರಿ ಸಮಿತಿ ರಚನೆಯಾಗುತ್ತದೆ ಎಂದು ತಿಳಿಸಿದರು. ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಈಗಾಗಲೇ ೭ ಜನರನ್ನೊಳಗೊಂಡ ಜೀವವೈವಿಧ್ಯ ನಿರ್ವಹಣಾ ಸಮಿತಿ ಇದ್ದು ಈ ಸಮಿತಿಗೆ ಪಾರಂಪರಿಕ ವೈದ್ಯರುಗಳನ್ನು ಸೇರಿಸಿಕೊಳ್ಳುವ ಅವಕಾಶವನ್ನು ಜೀವವೈವಿಧ್ಯ ಕಾಯ್ದೆಯಡಿ ಅನುಮತಿ ಇದ್ದು. ಇದರ ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ನಂತರ ವೈದ್ಯರುಗಳು ಮತ್ತು ಸಲಹೆಗಾರರೊಂದಿಗೆ ಅರ್ಥಪೂರ್ಣವಾಗಿ ಸಂವಾದವನ್ನು ನಡೆಸಲಾಯಿತು.
ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನಯ್ಯ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಪಾರಂಪರಿಕ ವೈದ್ಯರ ಸಭೆ ನಡೆಯುತ್ತಿದ್ದು ಇದರ ಸದುಪಯೋಗವನ್ನು ನಮ್ಮ ವೈದ್ಯರುಗಳು ಬಳಸಿಕೊಳ್ಳಬೇಕೆಂದರು.
ವೇದಿಕೆಯಲ್ಲಿ ಕೋಲಾರ ತಾಲೂಕು ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷ ವೈದ್ಯ ಅಶೋಕ್, ಹಿರಿಯ ವೈದ್ಯರಾದ ರಾಮಚಂದ್ರಪ್ಪ ಉಪಸ್ಥಿತರಿದ್ದರು.
ಮುಳಬಾಗಿಲಿನ ವೈದ್ಯ ಹರೀಶ್ ಬಾಬು ಪ್ರಾರ್ಥಿಸಿ, ಸ್ವಾಗತಿಸಿದರು ಕೋಲಾರ ತಾಲೂಕು ಪಾರಂಪರಿಕ ವೈದ್ಯ ಪರಿಷತ್ ಕಾರ್ಯದರ್ಶಿ ಅಂಜನಪ್ಪ ವಂದಿಸಿದರು. ಸಭೆಯಲ್ಲಿ ೩೦ಕ್ಕೂ ಹೆಚ್ಚು ಜನ ಪಾರಂಪರಿಕ ವೈದ್ಯರುಗಳು ಭಾಗವಹಿಸಿದ್ದರು.