
ಕೋಲಾರ ಆ.೮,-ಕೋಲಾರ ಜಿಲ್ಲಾದ್ಯಾಂತ ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆಗಳಿಂದ ವಂಚಿತರಾದಂತಹ ೫ ವಷದ ಒಳಗಿನ ಎಲ್ಲಾ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಸಿಕೆಗಳನ್ನು ಪೂರ್ಣಗೊಳಿಸಲು ಸರ್ಕಾರ ಇಂದ್ರಧನುಷ ಅಭಿಯಾನ ೫.೦ ಆಯೋಜಿಸಿದೆ ಇದನ್ನು ಎಲ್ಲರೂ ಸದುಪಯೋಗಪಡಿಸಿ ಕೊಳ್ಳಬೇಕು ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಕೊತ್ತೂರು ಜಿ. ಮಂಜುನಾಥ್ ತಿಳಿಸಿದರು.
ಚಿಕ್ಕಬಳ್ಳಾಪುರ ಮಾರ್ಗದಲ್ಲಿನ ರಹಮತ್ ನಗರದ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇವರ ಸಹಯೋಗದಲ್ಲಿ ಪರಿಣಾಮಕಾರಿ ಮಿಷನ್ ಇಂದ್ರಧನುಷ ೦.೫ ಅಭಿಯಾನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಗರದ ಎಲ್ಲಾ ಆಶಾ ಕಾರ್ಯಕತೆಯರು ಹಾಗೂ ಅಂಗನವಾಡಿ ಕಾರ್ಯಕತೆಯರು ಹಾಗೂ ನಗರಸಭೆ ಸದಸ್ಯರು ಎಲ್ಲರೂ ಸೇರಿ ತಾವೇ ಖುದ್ದಾಗಿ ಮನೆಮನೆಗೂ ಭೇಟಿ ನೀಡಿ ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರು ಮಿಷನ್ ಇಂದ್ರಧನುಷ ಲಸಿಕೆ ಪಡೆದಿದ್ದಾರೆಯೇ ಎಂಬುದು ಖಾತ್ರಿಪಡಿಸಿಕೊಳ್ಳಿ ಎಂದರು ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿರುವ ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರು ಲಸಿಕೆಯಿಂದ ವಂಚಿತರಾಗಬಾರದು. ಅವರೇ ದೇಶದ ಮುಂದಿನ ಭವಿಷ ಅವರ ಭವಿಷ್ಯ ನಮ್ಮ ಕೈಯಲ್ಲಿದೆ. ಮುಂದಿನ ದಿನಗಳಲ್ಲಿ ಅವರು
ಡಾ|| ಬಿ.ಆರ್ ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಡಾ|| ಎ.ಪಿ.ಜೆ ಅಬ್ದುಲ್ ಕಲಾಂ, ಐಎಎಸ್ ಅಧಿಕಾರಿ, ಐಪಿಎಸ್, ಇಂತಹ ದೊಡ್ಡ ದೊಡ್ಡ ವ್ಯಕ್ತಿಗಳಾಗಬಹುದು ಆದ್ದರಿಂದ ಎಲ್ಲರೂ ಮುಂಜಾಗ್ರತೆ ವಹಿಸಬೇಕು ಎಂದು ಹೇಳಿದರು. ನಾನು ಹೆಚ್ಚಿನ ಆದ್ಯತೆ ಶಿಕ್ಷಣ, ಆರೋಗ್ಯ, ರೈತರಿಗೆ, ಉದ್ಯೋಗ ಸೃಷ್ಟಿಗೆ, ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತೇನೆ ಎಂದು ತಿಳಿಸಿದರು.
ನಗರಸಭೆ ಸದಸ್ಯರಾದ ಅಂಬರೀಶ್ ಅವರು ಮಾತನಾಡಿ ಕೋಲಾರ ಜಿಲ್ಲೆಯ ವ್ಯಾಪ್ತಿಯಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಪರಿಣಾಮಕಾರಿ ಮಿಷನ್ ಇಂದ್ರಧನುಷ ೫.೦ ಕಾರ್ಯಕ್ರಮದ ಅಡಿಯಲ್ಲಿ ಚುಚ್ಚುಮದ್ದನ್ನು ಪಡೆಯದೆ ಇರುವ ಮಕ್ಕಳನ್ನು, ಗರ್ಭಿಣಿಯರುನ್ನು ಪತ್ತೆಹಚ್ಚಿ ಬಾಲಕ್ಷಯ, ಪೋಲಿಯೋ, ಜಾಂಡೀಸ್, ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು, ಅತಿಸಾರಬೇಧಿ, ನಿಮೋನಿಯಾ, ಮೆದುಳು ಜ್ವರ, ದಡಾರ ಹಾಗೂ ರುಬೆಲ್ಲಾ. ಈ ರೀತಿಯ ೧೧ ಮಾರಣಾಂತಿಕ ಕಾಯಿಲೆಗಳ ವಿರುದ್ಧ ಹೋರಾಡುವ ಜೀವ ರಕ್ಷಕ ಚುಚ್ಚುಮದ್ದನ್ನು ನೀಡುತ್ತಿದ್ದಾರೆ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಗದೀಶ್, ಮಾತನಾಡಿ ಮೊದಲನೇ ಸುತ್ತು ಆಗಸ್ಟ್ ೭, ೨೦೨೩ ರಿಂದ ಆಗಸ್ಟ್ ೧೨, ೨೦೨೩ ವರೆಗೆ ಹಾಗೂ ಎರಡನೆಯ ಸುತ್ತು ಸೆಪ್ಟೆಂಬರ್ ೧೧, ೨೦೨೩ ರಿಂದ ಸೆಪ್ಟೆಂಬರ್ ೧೬, ೨೦೨೩ ವರೆಗೂ ನೀಡುತ್ತಿದ್ದಾರೆ. ಮೂರನೇ ಸುತ್ತು ಅಕ್ಟೋಬರ್ ೯, ೨೦೨೩ ರಿಂದ ಅಕ್ಟೋಬರ್ ೧೪, ೨೦೨೩ ರ ವರೆಗೂ ನಡೆಯಲಿದೆ. ಇದನ್ನು ಎಲ್ಲಾ ಐದು ವರ್ಷದ ಒಳಗಿನ ಎಲ್ಲಾ ಮಕ್ಕಳು ಹಾಗೂ ಗರ್ಭಿಣಿಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರಿಣಾಮಕಾರಿ ಮಿಷನ್ ಇಂದ್ರಧನುಷ್ ೫.೦ ಅಭಿಯಾನ ಕುರಿತ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್. ಅನಿಲ್‌ಕುಮಾರ್, ಅಪರ ಜಿಲ್ಲಾಧಿಕಾರಿಗಳಾದ ಡಾ. ಶಂಕರ್ ವಣಿಕ್ಯಾಳ್, ಜಿಲ್ಲಾ ನೋಡಲ್ ಅಧಿಕಾರಿ ಡಾ. ವೀಣಾ, ಜಿಲ್ಲಾ ಶಸ್ತ್ರಚಿಕಿಸ್ತಕರಾದ ಡಾ. ವಿಜಯ್ ಕುಮಾರ್, ಡಾ. ಪ್ರಸನ್ನಕುಮಾರ್ ಆರ್‌ಸಿಎಚ್ ಅಧಿಕಾರಿ ಡಾ. ವಿಜಯಕುಮಾರಿ, ಜಿಲ್ಲಾ ಕುಷ್ಟರೋಗ ನಿಯಂತ್ರಣ ಅಧಿಕಾರಿ ಡಾ. ನಾರಾಯಣಸ್ವಾಮಿ, ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ. ಚಾರಿಣಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಎ.ವಿ. ನಾರಾಯಣಸ್ವಾಮಿ, ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮ, ನಗರಸಭೆ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.