ಚಿತ್ರದುರ್ಗ. ಮೇ.೨೭; ಜಿಲ್ಲೆಯಲ್ಲಿ ಮಳೆ ಪ್ರಾರಂಭವಾಗಿದ್ದು, ಡೆಂಗೀ ಮತ್ತು ಇತರೆ ಕೀಟಜನ್ಯ ರೋಗಗಳ ನಿಯಂತ್ರಣಕ್ಕಾಗಿ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡೆಂಗೀ ಮತ್ತು ಚಿಕುಂಗುನ್ಯಾ ನಿಯಂತ್ರಣ ಮತ್ತು ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಬಗ್ಗೆ ಜಿಲ್ಲಾಮಟ್ಟದ ಅಂತರ್ ಇಲಾಖಾ ಸಮನ್ವಯ ಸಮಿತಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಳೆಗಾಲದಲ್ಲಿ ಡೆಂಗ್ಯೂ ಹಾಗೂ ಚಿಕುಂಗುನ್ಯಾದಂತಹ ಕೀಟಜನ್ಯ ರೋಗಗಳ ಸಂಖ್ಯೆ ಹೆಚ್ಚಾಗುವ ಸಂಭವವಿದ್ದು, ನಾಗರೀಕರು ತಮ್ಮ ಜವಾಬ್ದಾರಿ ಅರಿತು ತಮ್ಮ ಮನೆ ಹಾಗೂ ಸುತ್ತ-ಮುತ್ತಲಿನ ಸ್ಥಳಗಳು ಶುಭ್ರವಾಗಿರಿಸಿಕೊಂಡು ಸೊಳ್ಳೆಗಳ ಉತ್ಪತ್ತಿ ತಡೆಗಟ್ಟಬೇಕು. ಆ ಮೂಲಕ ಕೀಟಜನ್ಯ ರೋಗ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಸಲಹೆ ನೀಡಿದರು.ಮನೆಯಲ್ಲಿ ಇರುವ ನೀರಿನ ತೊಟ್ಟಿಗಳು, ಡ್ರಂಗಳು, ಬ್ಯಾರೆಲ್‍ಗಳು ಮತ್ತು ಸೆಂಟೆಕ್ಸ್‍ಗಳು, ನೀರಿನ ಸಂಗ್ರಹಾಗಾರಗಳನ್ನು ಕನಿಷ್ಟ ವಾರಕ್ಕೆ ಒಂದು ಬಾರಿ ಸ್ವಚ್ಛಗೊಳಿಸಬೇಕು ಹಾಗೂ ಭದ್ರವಾಗಿ ಮುಚ್ಚಿಡಬೇಕು. ಮನೆಯ ಸುತ್ತಮುತ್ತ ಮಳೆ ನೀರು ಸಂಗ್ರಹವಾಗುವ ಟೈರ್‍ಗಳು, ತೆಂಗಿನ ಚಿಪ್ಪುಗಳು, ಮುಂತಾದವುಗಳಲ್ಲಿ ನೀರು ಸಂಗ್ರಹವಾಗದಂತೆ ಸೂಕ್ತವಾಗಿ ವಿಲೇವಾರಿ ಮಾಡಬೇಕು. ಅನಾವಶ್ಯಕವಾಗಿ ನೀರು ಸಂಗ್ರಹಿಸಬಾರದು. ಈ ಕುರಿತು ಪ್ರತಿ ಮನೆ ಮನೆಗೆ ಭೇಟಿ ನೀಡಿ, ನಿರಂತರವಾಗಿ ಸಮೀಕ್ಷೆ ನಡೆಸಬೇಕು. ಡೆಂಗೀ ನಿಯಂತ್ರಣಕ್ಕಾಗಿ ವಿಶೇಷವಾಗಿ ಪ್ರಕರಣಗಳ ಸಂಖ್ಯೆಯಾಗಿರುವ ಕಡೆ ಹಾಗೂ ಸ್ಲಂ ಏರಿಯಾಗಳಲ್ಲಿ ವಿಶೇಷವಾಗಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುವಂತೆ ತಾಕೀತು ಮಾಡಿದರು.ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಅತ್ಯುತ್ತಮ. ಹಾಗಾಗಿ ನಗರದ ಪ್ರದೇಶಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಕಸ ವಿಲೇವಾರಿ ವಾಹನಗಳ ಮೂಲಕ ಜಾಗೃತಿ ಮೂಡಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಚರಂಡಿಗಳ ಸ್ಚಚ್ಛತೆ ಆದ್ಯತೆ ನೀಡಬೇಕು. ಡೆಂಗೀ ಹಾಗೂ ಚಿಕುಂಗುನ್ಯಾ ರೋಗ ನಿಯಂತ್ರಣದ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಬೇಕು ಎಂದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ರೇಣುಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.