
ಕಲಬುರಗಿ:ನ.06: ರೋಗಿಯಾಗದೇ ರೋಗಗಳನ್ನು ಸಕಾರಾತ್ಮಕವಾಗಿ ಸಹಿಸಿದರೆ ಅವು ಬಹುಬೇಗನೇ ಗುಣಪಡಿಸಬಹುದು ಎಂದು ದೆಹಲಿಯ ಪ್ರಸಿದ್ಧ ಹೃದಯರೋಗ ತಜ್ಞರಾದ ಡಾ. ಮೋಹಿತ್ ಗುಪ್ತಾ ಅವರು ಹೇಳಿದರು.
ನಗರದ ಹೊರವಲಯದಲ್ಲಿನ ಬ್ರಹ್ಮಾಕುಮಾರೀಸ್‍ನ ಅಮೃತ ಸರೋವರ ಪರಿಸರದಲ್ಲಿ ವಿಶೇಷವಾಗಿ ಏರ್ಪಡಿಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಏನೆಲ್ಲ ಘಟನೆಗಳು ನಡೆಯುತ್ತಿವೆ. ಅವೆಲ್ಲವೂ ನಮ್ಮ ಸಕಾರಾತ್ಮಕ ಅಥವಾ ನಕಾರಾತ್ಮಕ ಸಂಕಲ್ಪ ಅಥವಾ ವಿಚಾರಗಳ ಆಧಾರದಿಂದ ಮಾತ್ರ. ಆದ್ದರಿಂದ ಸಂಕಲ್ಪ ಮಾಡುವ ನಾವುಗಳು ಸಕಾರಾತ್ಮಕ ವಿಚಾರಗಳನ್ನು ರೂಢಿಸಿಕೊಂಡರೆ ಶಾರೀರಿಕ ಅಥವಾ ಮಾನಸಿಕ ಸಿದ್ದಿಯನ್ನು ಸಾಧಿಸಬಹುದು ಎಂದರು.
ಯೋಗ ಶಾರೀರಿಕ ಪ್ರಕ್ರಿಯೆ ಅಲ್ಲ, ಹೊರತು ತನ್ನನ್ನು ತಾನು ಒಂದು ಚೈತನ್ಯ ಆತ್ಮಶಕ್ತಿ ಅಹುದೆಂಬ ದೃಢ ಸಂಕಲ್ಪ ಬೇಕು. ನನ್ನ ವೈದ್ಯಕೀಯ ವೃತ್ತಯು ಕಳೆದ 25 ವರ್ಷಗಳಲ್ಲಿ ಸಕಾರಾತ್ಮಕ ಚಿಂತನದ ಮೂಲಕ ಅನೇಕ ಸಮಸ್ಯೆಗಳಿಂದ ಪಾರಾಗಿದ್ದೇನೆ ಎಂದು ಅವರು ಹೇಳಿದರು.
ವೈದ್ಯರೇ ವೈದ್ಯ ನಾರಾಯಣ ಎಂಬುದನ್ನು ಅರಿತು ಅಥವಾ ಮಾಡಿದ್ದುಣ್ಣೋ ಮಹಾರಾಯ ಎಂಬ ನಾಣ್ಣುಡಿಯನ್ನು ಅರಿತು ಜೀವನ ಸಾಗಿಸಿ ಎಂದು ಅವರು ಸಲಹೆ ಮಾಡಿದರು. ಕಾರ್ಯಕ್ರಮದಲ್ಲಿ ಕಲಬುರ್ಗಿ, ಯಾದಗಿರಿ, ಮಹಾರಾಷ್ಟ್ರದ ಲಾತೂರಿನಿಂದ ಬಂದ ಸುಮಾರು 500 ವೈದ್ಯರ ಸಮೂಹವು ಸೇರಿತ್ತು. ವಿಶೇಷವಾಗಿ ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ್ ನಿಷ್ಠಿ, ಮಾಜಿ ಶಾಸಕ ಡಾ. ಎ.ಬಿ. ಮಲಕರೆಡ್ಡಿ, ಶ್ರೀಮತಿ ಡಾ. ಶಕುಂತಲಾ ಬನಾಳೆ, ಡಾ. ಭಾಗ್ಯಶ್ರೀ ಶರಣಪ್ರಕಾಶ್ ಪಾಟೀಲ್, ಹಿಂಗುಲಾಂಬಿಕಾ ಆಯುರ್ವೇದ ಮಹಾವಿದ್ಯಾಲಯದ ಪ್ರಿನ್ಸಿಪಾಲ್ ಡಾ. ಅಲ್ಲಮಪ್ರಭು ಗುಡ್ಡಾ, ಸ್ವಾಸ್ತ್ಯ ಮತ್ತು ಪರಿವಾರ ನಿಯೋಜನೆ ಇಲಾಖೆಯ ಉಪ ನಿರ್ದೇಶಕ ಡಾ. ಗಣಜಲಖೇಡ್, ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ. ಹರವಾಳ್, ಇಎಸ್‍ಐ ದಂತ ವೈದ್ಯಕೀಯ ವಿಭಾಗದ ಡೀನ್ ಡಾ. ಪ್ರಶಾಂತ್ ಪಾಟೀಲ್, ಕೆಬಿಎನ್ ವೈದ್ಯಕೀಯ ಕಾಲೇಜಿನ ಡೀನ್ ಡಾ. ಸಿದ್ದೇಶ್, ಸೊಲ್ಲಾಪುರದ ಡಾ. ಆನಂದ್ ನಾರಾಯಣ್, ಡಾ. ವೈಶಾಲಿ ಮಾಲೂ ಹಾಗೂ ಮೌಂಟ್ ಅಬುವಿನ ಡಾ. ರಮ್ಯಾ ಮುಂತಾದವರು ಉಪಸ್ಥಿತರಿದ್ದರು.
ಉಪ ವಲಯದ ರಾಜಯೋಗಿನಿ ಬಿಕೆ ವಿಜಯಾದೀದಿ, ರಾಜಯೋಗಿ ಡಾ. ಪ್ರೇಮ್ ಅವರು ತಮ್ಮ ವಿಚಾರಗಳನ್ನು ಪ್ರಸ್ತುತಪಡಿಸಿದರು. ಚಿರಾಯು ಆಸ್ಪತ್ರೆಯ ಮುಖ್ಯಸ್ಥ ಡಾ. ಮಂಜುನಾಥ್ ದೋಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು ಎಂದು ಅಮೃತ ಸರೋವರದ ಸಂಚಾಲಕಿ ಬಿಕೆ ಶಿವಲೀಲಾ ಅವರು ತಿಳಿಸಿದ್ದಾರೆ.