ರೊನಾಲ್ಡೊಗೆ 50 ಕೋಟಿ ಫಾಲೋವರ್‍ಸ್

ವಾಷಿಂಗ್ಟನ್, ನ.೨೨- ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಸೂಪರ್ ಸ್ಟಾರ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ಇನ್ಸ್‌ಟಾಗ್ರಾಮ್‌ನಲ್ಲಿ ಬರೋಬ್ಬರಿ ೫೦ ಕೋಟಿ ಫಾಲೋವರ್ಸ್‌ಗಳ ಗಡಿ ಮುಟ್ಟಿದ ವಿಶ್ವದ ಮೊದಲ ವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫೇಸ್‌ಬುಕ್, ಟ್ವಿಟರ್ ಹಾಗೂ ಇನ್ಸ್‌ಟಾಗ್ರಾಮ್‌ನಲ್ಲಿ ಈ ಮೈಲಿಗಲ್ಲು ಮುಟ್ಟಿದ ವಿಶ್ವದ ಮೊದಲ ಪ್ರಖ್ಯಾತ ವ್ಯಕ್ತಿ ಎನ್ನುವ ಶ್ರೇಯ ಅವರದಾಗಿದ್ದು, ಜಗತ್ತಿನ ಶೇ.೧೦ರಷ್ಟು ಜನರು ಇನ್ಸ್‌ಟಾಗ್ರಾಮ್‌ನಲ್ಲಿ ರೊನಾಲ್ಡೋ ಅವರ ಫಾಲೋವರ್‌ಗಳಾಗಿದ್ದಾರೆ.
ಅದೇ ರೀತಿ, ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಇನ್ಸ್‌ಟಾಗ್ರಾಮ್‌ನಲ್ಲಿ ಹೊಂದಿರುವ ಫಾಲೋವರ್‌ಗಳಿಗಿಂತ ದುಪ್ಪಟ್ಟು ಫಾಲೋವರ್ಸ್‌ಗಳನ್ನು ರೊನಾಲ್ಡೊ ಇನ್ಸ್‌ಟಾಗ್ರಾಮ್‌ನಲ್ಲಿ ಹೊಂದಿದ್ದಾರೆ.
ಅದು ಅಲ್ಲದೆ, ರೊನಾಲ್ಡೋ ಇನ್ಸ್‌ಟಾಗ್ರಾಮ್‌ನಲ್ಲಿ ಶೇರ್ ಮಾಡುವ ಒಂದು ಸ್ಪಾನ್ಸರ್ ಪೋಸ್ಟ್‌ನಿಂದ ೨.೩ ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ ೧೮.೮೨ ಕೋಟಿ ರೂಪಾಯಿ ಹಣ ಪಡೆಯತ್ತಾರೆ. ಈ ಪಟ್ಟಿಯಲ್ಲಿ ೩ನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ತಮ್ಮ ಒಂದು ಪೋಸ್ಟ್‌ಗೆ ೧೩.೯೧ ಕೋಟಿ ರೂಪಾಯಿ ಹಣ ಗಳಿಕೆ ಮಾಡುತ್ತಾರೆ.
ಅಲ್ಲದೆ, ಐದು ಬಾರಿಯ ಫಿಫಾದ ವರ್ಷದ ಆಟಗಾರ ಪ್ರಶಸ್ತಿ ಗೆದ್ದಿರುವ ಕ್ರಿಶ್ಚಿಯಾನೋ ರೊನಾಲ್ಡೋ ೨೦೨೦ರಲ್ಲಿ ತಮ್ಮ ಜೀವಮಾನದ ಆದಾಯವನ್ನು ೧ ಬಿಲಿಯನ್ ಅಂದರೆ ೧೦೦ ಕೋಟಿಯ ಗರಿ ಮುಟ್ಟಿಸಿದ್ದರು. ಆ ಮೂಲಕ ೧೦೦ ಕೋಟಿಯ ಆದಾಯದ ಗಡಿ ಬ್ರೇಕ್ ಮಾಡಿದ ವಿಶ್ವದ ಮೊದಲ ಆಟಗಾರ ಎನಿಸಿದ್ದರು.
ಇನ್ನು ಫುಟ್‌ಬಾಲ್ ದಾಖಲೆಗಳ ವಿಚಾರದಲ್ಲೂ ರೊನಾಲ್ಡೋ, ಮೆಸ್ಸಿಗಿಂತ ಬಹಳ ಮುಂದೆ ಇದ್ದಾರೆ. ಕ್ಲಬ್ ಹಾಗೂ ರಾಷ್ಟ್ರೀಯ ತಂಡದ ಪರವಾಗಿ ಪೋರ್ಚುಗಲ್‌ನ ಫುಟ್‌ಬಾಲ್ ಸ್ಟಾರ್ ಈವರೆಗೂ ೮೦೦ಕ್ಕೂ ಅಧಿಕ ಗೋಲು ಬಾರಿಸಿದ್ದಾರೆ. ರಾಷ್ಟ್ರೀಯ ತಂಡದ ಪರವಾಗಿ ಅವರು ಬಾರಿಸಿರುವ ೧೧೦ ಅಧಿಕ ಗೋಲು, ಪುರುಷ ಹಾಗೂ ಮಹಿಳಾ ಫುಟ್‌ಬಾಲ್‌ನಲ್ಲಿ ರಾಷ್ಟ್ರೀಯ ತಂಡದ ಪರವಾಗಿ ವ್ಯಕ್ತಿಯೊಬ್ಬ ಬಾರಿಸಿದ ಗರಿಷ್ಠ ಗೋಲು ಎನಿಸಿದೆ.