ರೊಟೇಷನ್‌ಅಡಿ ನೌಕರರ ಹಾಜರಿಗೆ ಸುತ್ತೋಲೆ ಸಾಧ್ಯತೆ

ಕೋಲಾರ,ಏ.೧೯:ಕೊರೋನಾ ೨ನೇ ಅಲೆ ಉಲ್ಬಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ನೌಕರರ ಸುರಕ್ಷತೆ ದೃಷ್ಟಿಯಿಂದ ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯದ ಸರ್ಕಾರಿ ಕಚೇರಿಗಳಲ್ಲೂ ರೊಟೇಷನ್ ಪದ್ದತಿ ಅನುಸರಿಸುವಂತೆ ಕೋರಿ ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ಮನವಿಗೆ ಸೂಕ್ತ ಸ್ಪಂದನೆ ಸಿಕ್ಕಿದ್ದು, ಶೀಘ್ರ ಜಾರಿಗೆ ಬರುವ ನಿರೀಕ್ಷೆ ಇದೆ ಎಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನ ರಾಜ್ಯ ನೌಕರರ ಸಂಘದ ವಚ್ರ್ಯುಯಲ್ ಆನ್‌ಲೈನ್ ಮೀಟಿಂಗ್‌ನಲ್ಲಿ ಭಾಗವಹಿಸಿದ್ದ ನಂತರ ಮಾಧ್ಯಮಗಳಿಗೆ ಈ ಕುರಿತು ಅವರು ಹೇಳಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರ ಸೋಂಕು ತಡೆಗೆ ಹಲವಾರು ಮುಂಜಾಗ್ರತಾ ಕ್ರಮ ಕೈಗೊಂಡಿದೆ, ಸರ್ಕಾರದ ಈ ಕಾರ್ಯದಲ್ಲಿ ನೌಕರರು ಹಗಲಿರುಳು ಶ್ರಮಿಸಿ ಸರ್ಕಾರದ ಯೋಜನೆಗಳನ್ನು ಕಾರ್ಯಗತಗೊಳಿಸಲು ಕೆಲಸ ಮಾಡುತ್ತಿದ್ದಾರೆ.ಸೋಂಕಿನ ತೀವ್ರತೆ ಹಿನ್ನಲೆಯಲ್ಲಿ ನೌಕರರ ಕುಟುಂಬ ವರ್ಗದಲ್ಲಿ ಆತಂಕ ಮೂಡಿರುವುದರಿಂದ ಸರ್ಕಾರ ಕೇಂದ್ರ ಮಾದರಿಯಲ್ಲಿ ರಾಜ್ಯದಲ್ಲಿ ನೌಕರರ ಸುರಕ್ಷತೆ ದೃಷ್ಟಿಯಿಂದ ರೊಟೇಷನ್ ಪದ್ದತಿ ಜಾರಿಗೆ ತರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಈ ಆದೇಶ ಹೊರಬಿದ್ದರೆ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಇಲಾಖಾ ಮುಖ್ಯಸ್ಥರು ಹಾಗೂ ಶೇ.೫೦ ಹಾಗೂ ಶೇ.೩೩ ಅನುಪಾತ ಅನುಸರಿಸಿ ನೌಕರರು ಕಚೇರಿಗೆ ರೋಟೇಷನ್ ಆಧಾರಾದ ಮೇಲೆ ಹಾಜರಾಗಲು ಅವಕಾಶ ಕಲ್ಪಿಸಲಾಗುತ್ತದೆ.
ಈ ನಡುವೆ ಗರ್ಭಿಣಿ ಮಹಿಳಾ ನೌಕರರಿಗೆ ಹಾಗೂ ೫೫ ವರ್ಷ ವಯೋಮಿತಿ ಮೀರಿ ಅನಾರೋಗ್ಯದಿಂದ ಬಳಲುತ್ತಿರುವ ನೌಕರರಿಗೆ ಹಾಜರಾತಿಯಿಂದ ವಿನಾಯಿತಿ ನೀಡಿ ಮನೆಯಿಂದಲೇ ಕರ್ತವ್ಯ ನಿರ್ವಹಣೆಗೆ ಅವಕಾಶ ಕಲ್ಪಿಸಲು ಸರ್ಕಾರಕ್ಕೆ ಷಡಕ್ಷರಿ ಅವರು ಮನವಿ ಮಾಡಿದ್ದು, ಶೀಘ್ರ ಆದೇಶ ಹೊರಬೀಳುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಶಿಕ್ಷಕರ ಕಡ್ಡಾಯ,ಹೆಚ್ಚುವರಿ ವರ್ಗಾವಣೆ ಸಂಬಂಧ ಚರ್ಚಿಸಿ ಶೀಘ್ರ ಈ ಕಾರ್ಯ ಮುಗಿಸಲು ಸುಗ್ರಿವಾಜ್ಞೆ ತರುವ ನಿಟ್ಟಿನಲ್ಲಿ ಏ.೧೯ ರಂದು ಸಂಪುಟದಲ್ಲಿ ಚರ್ಚೆಗೆ ಬರುವುದಿತ್ತು. ಆದರೆ ಮುಖ್ಯಮಂತ್ರಿಗಳು ಕೋವಿಡ್‌ಗೆ ತುತ್ತಾಗಿರುವುದರಿಂದ ಇದು ವಿಳಂಬವಾಗಿದೆ ಎಂದು ಸಭೆಯಲ್ಲಿ ರಾಜ್ಯಾಧ್ಯಕ್ಷರು ಮಾಹಿತಿ ನೀಡಿದ್ದಾರೆ ಎಂದು ಸುರೇಶ್‌ಬಾಬು ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಹೊಸ ಬೈಲಾ ಸಿದ್ದವಾಗಿದ್ದು, ಹೊಸ ಬೈಲಾ ಏ.೧೫ ರಿಂದಲೇ ಜಾರಿಗೆ ಬಂದಿದೆ, ಬೈಲಾದಲ್ಲಿ ಸಂಘದ ಚುನಾವಣೆ ಪ್ರಕ್ರಿಯೆಯಿಂದ, ಶಿಸ್ತು, ಆರ್ಥಿಕ ಭ್ರಷ್ಟತೆಗೆ ತಡೆ ಸೇರಿದಂತೆ ಎಲ್ಲಾ ಅಗತ್ಯ ತಿದ್ದುಪಡಿ ಮಾಡಲಾಗಿದ್ದು, ೧೯೬ ಪುಟಗಳ ಬೈಲಾವನ್ನು ಅನುಮೋದಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ಮುಗಿದ ನಂತರ ನೌಕರರ ದಿನಾಚರಣೆ ನಡೆಸಲು ತೀರ್ಮಾನ, ಈ ಸಂಬಂಧ ನೌಕರರಿಗೆ ನೀಡಬೇಕಾದ ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಕೋವಿಡ್ ಸಂದರ್ಭದಲ್ಲಿ ವಾರಿಯರ್ಸ್ ಆಗಿ ಮಾಡಿದ ಅತ್ಯುತ್ತಮ ಸೇವೆಯನ್ನು ಆದ್ಯತೆ ಮೇಲೆ ಪರಿಗಣಿಸಲು ಸಂಘ ಮನವಿ ಮಾಡಿದೆ, ಜತೆಗೆ ಉತ್ತಮ ನೌಕರರನ್ನು ಗುರುತಿಸಿ ಪುರಸ್ಕರಿಸಲು ಕೋರಿದೆ ಎಂದು ತಿಳಿಸಿದ್ದಾರೆ.
ಉಳಿದಂತೆ ಮಾಲೂರು ತಾಲ್ಲೂಕಿನಿಂದ ಶೇ.೮೯.೧೪, ಮುಳಬಾಗಿಲು ತಾಲ್ಲೂಕಿನಿಂದ ೮೪.೭೪, ಶ್ರೀನಿವಾಸಪುರ ತಾಲ್ಲೂಕಿನಿಂದ ಶೇ.೮೬.೯೮, ಕೆಜಿಎಫ್ ತಾಲ್ಲೂಕಿನಿಂದ ಶೇ.೮೫.೮೪ ರಷ್ಟು ಸದಸ್ಯತ್ವ ಶುಲ್ಕ ರಾಜ್ಯ ಸಂಘಕ್ಕೆ ಸಂದಾಯವಾಗಿದೆ. ಬಂಗಾರಪೇಟೆ ತಾಲ್ಲೂಕಿನಿಂದ ಇನ್ನೂ ಶುಲ್ಕ ಪಾವತಿಯಾಗದಿರುವ ಕುರಿತು ಕ್ರಮವಹಿಸಲು ರಾಜ್ಯಾಧ್ಯಕ್ಷರು ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇಂದಿನ ವಚ್ಯುಯಲ್ ಆನ್‌ಲೈನ್ ಸಭೆಯಲ್ಲಿ ರಾಜ್ಯ ಸಂಘದ ಎಲ್ಲಾ ಪದಾಧಿಕಾರಿಗಳು, ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರುಗಳು ಪಾಲ್ಗೊಂಡಿದ್ದರು ಎಂದು ಸುರೇಶ್‌ಬಾಬು ಮಾಹಿತಿ ನೀಡಿದ್ದಾರೆ.