ರೈಲ್ವೇ ನೌಕರಿ ರದ್ದು ಮಾಡದಂತೆ ಆಗ್ರಹಿಸಿ ಪ್ರತಿಭಟನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.15:  ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿಯಿಂದ ಕೇಂದ್ರ ಸರ್ಕಾರ ರೈಲ್ವೇ ಇಲಾಖೆಯಲ್ಲಿನ 90 ಸಾವಿರ  ಹುದ್ದೆಗಳನ್ನು ರದ್ದು ಮಾಡಿರುವುದನ್ನು ವಿರೋಧಿಸಿ ಇಂದು ನಗರದ ರೈಲ್ವೇ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೇಂದ್ರದ ರೈಲ್ವೇ ಸಚಿವರಿಗೆ ಮನವಿ ಸಲ್ಲಿಸಿದ ಸಮಿತಿಯ  ಮುಖಂಡರುಗಳಾದ ಕೋಳೂರು ಪಂಪಾಪತಿ, ಜಗದೀಶ್ ನೆಮಕಲ್, ಉಮೇಶ್.ಎಸ್, ಸಲ್ಮಾನ್ ಮೊದಲಾದವರು
ದೇಶದೆಲ್ಲೆಡೆ ನಿರುದ್ಯೋಗ  ಹೆಚ್ಚುತ್ತಿರುವುದು  ಗೊತ್ತೇ ಇದೆ. ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿ ಹೆಚ್ಚಿದೆ. ತಾಂತ್ರಿಕ ಶಿಕ್ಷಣ ಪಡೆದು ರೈಲ್ವೆಗೆ ತಯಾರಿ ನಡೆಸುತ್ತಿರುವ ಈ ವಿದ್ಯಾವಂತ ನಿರುದ್ಯೋಗಿ ಯುವಕರ ಪಾಲಿಗೆ ಕೇಂದ್ರ ಸರ್ಕಾರದ ಈ ನಿರ್ಧಾರ ಅತ್ಯಂತ ನೋವಿನ ಸಂಗತಿಯಾಗಿದೆ. ಹಿಂದಿನ ವರ್ಷಗಳಲ್ಲಿಯೂ ಸರ್ಕಾರವು ರೈಲ್ವೆಯಲ್ಲಿ ನೌಕರರ ಸಂಖ್ಯೆಯನ್ನು ಕಡಿತಗೊಳಿಸಿದೆ. ರೈಲ್ವೆ ಇಲಾಖೆ ಪ್ರತಿ ವರ್ಷ ಸರಕಾರಕ್ಕೆ ಆದಾಯವನ್ನು ನೀಡುತ್ತಿದೆ. ಆದರೆ ಸರಕಾರ ದೇಶಿ ಮತ್ತು ವಿದೇಶಿ ಕಂಪನಿಗಳಿಗೆ ಲಾಭ ಮಾಡಿಕೊಡಲು ರೈಲ್ವೆಯನ್ನು ಖಾಸಗೀಕರಣ ಮಾಡಲು ಹೊರಟಿದೆ.
ಖಾಸಗೀಕರಣವು ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ರೈಲ್ವೆ ಇಲಾಖೆಯಲ್ಲಿ  ಹುದ್ದೆಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಿರಿ. ಖಾಲಿ ಇರುವ ಎಲ್ಲಾ ಹುದ್ದೆಗಳಿಗೆ ತಕ್ಷಣ ನೇಮಕಾತಿ ಮಾಡಿ, ರೈಲ್ವೇ ಖಾಸಗೀಕರಣ ಕೈ ಬಿಡಬೇಕು. ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಅಳವಡಿಸಿಕೊಂಡು ನಿಗದಿತ ಸಮಯದೊಳಗೆ ಮತ್ತು ನ್ಯಾಯೋಚಿತ ರೀತಿಯಲ್ಲಿ ನಡೆಸಬೇಕು ಎಂದು ಆಗ್ರಹಿಸಲಾಯಿತು.

Attachments area