ರೈಲ್ವೇ ಗೇಟ್ ಬಂದ್ : ವಾಹನ ಸಂಚಾರ ದುಸ್ತರ!

ಶಿವಮೊಗ್ಗ, ಡಿ. 4: ಸವಳಂಗ ರಸ್ತೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್, ತಾಂತ್ರಿಕ ಪರಿಶೀಲನೆ ಹಾಗೂ ಕಾಮಗಾರಿ ಉದ್ದೇಶದಿಂದ ರೈಲ್ವೆ ಇಲಾಖೆ ಮುಚ್ಚಿದೆ.ಇದರಿಂದ ಈ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಶನಿವಾರ ತೀವ್ರ ತೊಂದರೆ ಎದುರಿಸುವಂತಾಯಿತು. ಕೀರ್ತಿ ನಗರ, ಬೊಮ್ಮನಕಟ್ಟೆ ರಸ್ತೆ ಸುತ್ತಮುತ್ತಲಿನ ಬಡಾವಣೆಯ ಮೂಲಕ  ವಾಹನಗಳು ಓಡಾಡುತ್ತಿವೆ.ಬಸ್, ಲಾರಿ ಸೇರಿದಂತೆ ಸರಕು ಸಾಗಣೆಯ ಭಾರೀ ವಾಹನಗಳು, ಬಡಾವಣೆಗಳ ಕಿರಿದಾದ ರಸ್ತೆಗಳಲ್ಲಿ  ಸರಾಗವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಬೆಳಿಗ್ಗೆ ಕೀರ್ತಿ ನಗರ ಮುಖ್ಯ ರಸ್ತೆಯಲ್ಲಿ ಕಿ.ಮೀ. ಉದ್ದದ ಟ್ರಾಫಿಕ್ ಜಾಮ್ ಕಂಡುಬಂದಿತ್ತು.ಕಚೇರಿ, ಶಾಲಾ-ಕಾಲೇಜು ಮತ್ತಿತರ ಕೆಲಸಕಾರ್ಯಗಳಿಗೆ ತೆರಳುವವರು ತೀವ್ರ ಕಿರಿಕಿರಿ ಎದುರಿಸುವಂತಾಯಿತು. ಈ ಮಾರ್ಗದಲ್ಲಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಿ, ಸುಗಮ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.