ರೈಲ್ವೆ ಹಳಿ ಮೇಲೆ ಛಿದ್ರಗೊಂಡ ಮೂವರು ಗುರುತು ಪತ್ತೆ

ಬೆಂಗಳೂರು,ಜ.೧೧- ಗೌರಿಬಿದನೂರು ತಾಲ್ಲೂಕಿನ ತೊಂಡೆಬಾವಿ ರೈಲ್ವೆ ನಿಲ್ದಾಣದ ಸಮೀಪ ರೈಲು ಹರಿದು, ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೂವರ ಮೃತದೇಹಗಳ ಗುರುತು ದೃಢವಾಗಿದೆ.
ತಂದೆ ತಾಯಿ ಹಾಗೂ ಮಗಳು ಮೃತದೇಹಗಳು ಎಂಬುದು ಖಚಿತವಾಗಿದೆ. ಒರ್ವ ಪುರುಷ ಹಾಗೂ ಇಬ್ಬರು ಮಹಿಳೆಯರು ಮೃತದೇಹಗಳು ಮುಖ ಚರ್ಯೆ ಗುರುತು ಸಿಗದ ಹಾಗೆ ಛಿದ್ರವಾಗಿರುವ ಸ್ಥಿತಿಯಲ್ಲಿ ಕಳೆದ ಜ.೯ ರಂದು ಪತ್ತೆಯಾಗಿದ್ದವು.
ಮಾಹಿತಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಯಶವಂತಪುರ ಠಾಣೆಯ ಪಿಎಸ್‌ಐ ಶಿವಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಛಿದ್ರಗೊಂಡಿದ್ದರಿಂದ ಮೂವರ ಮೃತರ ಗುರುತು ಪತ್ತೆಯಾಗಿರಲಿಲ್ಲ. ಶರ್ಟ್ ಮೇಲೆ ವಿನಾಯಕ ಟೈಲರ್ಸ್ ಗೌರಿಬಿದನೂರು ಎಂಬ ಮಾಹಿತಿ ಅಧರಿಸಿ ಸ್ಥಳೀಯ ಪೊಲೀಸರಿಂದ ಮೃತರ ಗುರುತು ಪತ್ತೆಗೆ ಪ್ರಯತ್ನ ಮಾಡಲಾಗಿತ್ತು. ಇದೀಗ ಮೂವರ ಮೃತದೇಹಗಳ ಗುರುತು ಪತ್ತೆಯಾಗಿದೆ. ತಂದೆ ತಾಯಿ ಹಾಗೂ ಮಗಳು ಮೃತದೇಹಗಳು ಎಂಬುದಾಗಿ ಧೃಢವಾಗಿದೆ. ಮೃತರನ್ನು ತೊಂಡೆ ಬಾವಿ ಗ್ರಾಮದ ತಂದೆ ಮೈಲಾರಪ್ಪ, ತಾಯಿ ಪುಷ್ಪಲತಾ ಹಾಗೂ ಮಗಳು ಮಮತಾ ಎಂದು ಗುರುತಿಸಲಾಗಿದೆ. ಮೂವರ ಗುರುತನ್ನು ದಂಪತಿಯ ಕಿರಿಯ ಮಗಳು ದಾಕ್ಷಾಯಿಣಿ ಪತ್ತೆ ಹಚ್ಚಿದ್ದಾರೆ. ಮೂವರದ್ದು ಆತ್ಮಹತ್ಯೆ ಇರಬಹುದು ಎಂದು ಶಂಕಿಸಲಾಗಿದೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಎರಡು ದಿನಗಳಿಂದ ತಂದೆ-ತಾಯಿಗೆ ದಾಕ್ಷಾಯಿಣಿ ಕರೆ ಮಾಡುತ್ತಿದ್ದರು. ಆದರೆ, ಕರೆ ಸ್ವೀಕರಿಸಿದ ಹಿನ್ನೆಲೆ ಅನುಮಾನ ಬಂದು ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ತೋರಿಸಿದ ಪೋಟೋಗಳನ್ನು ನೋಡಿ ಮೃತರ ಗುರುತನ್ನು ಕಿರಿಯ ಮಗಳು ಪತ್ತೆ ಹಚ್ಚಿದ್ದಾರೆ.