ರೈಲ್ವೆ ಹಳಿ ಮಾರ್ಗ ಬದಲಾವಣೆ 1 ಸಾವಿರ ರೈತರ ಬದುಕು ಅತಂತ್ರ

ಬೆಂಗಳೂರು,ಡಿ.೪- ರೈಲ್ವೆ ಮಾರ್ಗ ನಿರ್ಮಾಣಕ್ಕಾಗಿ ಹಾಸನ ಜಿಲ್ಲೆಯ ಬೇಲೂರು ಮತ್ತು ಸಕಲೇಶಪುರ ತಾಲ್ಲೂಕುಗಳಲ್ಲಿ ರೈಲ್ವೆ ಹಳಿ ಮಾರ್ಗ ಬದಲಾಯಿಸಲು ಸರ್ಕಾರ ನಿರ್ಧಾರ ಕೈಗೊಂಡಿರುವುದರಿಂದ ೧ ಸಾವಿರ ಮಂದಿ ರೈತರ ಬದುಕು ಅತಂತ್ರವಾಗಿದೆ.
೧೯೯೬ರಿಂದಲೂ ಬಹುಪಾಲು ಸ್ವಂತ ಜಮೀನುಗಳನ್ನು ಹೊಂದಿರುವ ಈ ರೈತರನ್ನು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ನಿರುತ್ಸಾಹಗೊಳಿಸಲಾಗಿದೆ.
ಕಡೂರು ಮತ್ತು ಸಕಲೇಶಪುರ ನಡುವೆ ಹೊಸ ರೈಲ್ವೆ ಮಾರ್ಗವನ್ನು ನಿರ್ಮಾಣ ಮಾಡುವ ಸಂಬಂಧ ಅಂದಿನ ಸರ್ಕಾರ ಕೈಗೊಂಡು ಅಗತ್ಯವಿರುವ ಭೂಮಿಯನ್ನು ಗುರುತಿಸಿತ್ತು. ಆದರೆ, ಸರ್ಕಾರ ಏಕಮುಖ ನಿರ್ಧಾರದಿಂದಾಗಿ ಬೇಲೂರು-ಸಕಲೇಶಪುರ ನಡುವಣ ಹೊಸ ರೈಲು ಮಾರ್ಗವನ್ನು ಕೈಬಿಟ್ಟ ಕಾರಣದಿಂದಾಗಿ ರೈತರ ಬದುಕು ತತ್ತರಿಸಿ ಹೋಗಿದೆ.
ಅಸಹಾಯಕವಾಗಿರುವ ರೈತರು ಈ ಯೋಜನೆಯನ್ನು ಕೈಬಿಡಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ತಮಗೆ ಉಂಟಾಗಿರುವ ನಷ್ಟವನ್ನಾದರೂ ತುಂಬಿಕೊಡುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಇದುವರೆಗೆ ೨ ಬಾರಿ ಮಾತ್ರ ವಿಚಾರಣೆ ನಡೆದು ರೈಲ್ವೆ ಇಲಾಖೆ ಮತ್ತು ರಾಜ್ಯಸರ್ಕಾರಕ್ಕೂ ನೋಟೀಸ್ ನೀಡಲಾಗಿದೆ ಎಂದು ವಕೀಲ ಶ್ರೀನಿವಾಸ್‌ಗೌಡ ತಿಳಿಸಿದ್ದಾರೆ.