ರೈಲ್ವೆ ಸೇತುವೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳ ಭೇಟಿ

ಬೀದರ.ಮಾ.20: ಸಾರ್ವಜನಿಕರ ಅಪೇಕ್ಷೆಯ ಮೇರೆಗೆ ರಸ್ತೆ ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಮಾರ್ಚ 19ರಂದು ಬೀದರ ಸಿಟಿಯ ಹಳೆಯ ಆರ್‍ಟಿಓ ಕಚೇರಿಯ ಸಮೀಪದ ರೈಲ್ವೆ ಸೇತುವೆ ಸ್ಥಳಕ್ಕೆ ಭೇಟಿ ನೀಡಿದರು.
ರೈಲ್ವೆ ಸೇತುವೆಯಿಂದ ಸಂಚರಿಸುವಾಗ ಇಲ್ಲಿ ಬಹಳಷ್ಟು ತಿರುವು ಇರುವ ಕಾರಣ ಜನರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ಕೂಡಲೆ ಸರಿಪಡಿಸಬೇಕು ಎಂದು ಅಲ್ಲಿನ ಸಾರ್ವಜನಿಕರು ಜಿಲ್ಲಾಧಿಕಾರಿಗಳಲ್ಲಿ ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಬೀದರ ತಹಸೀಲ್ದಾರ, ನಗರಸಭೆ, ಲೋಕೋಪಯೋಗಿ, ನಗರಾಭಿವೃದ್ಧಿ ಕೋಶದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ಅಲ್ಲಿನ ರಸ್ತೆಯ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದರು.
ಈ ರೈಲ್ವೆ ಸೇತುವೆ ಬಳಸಿ ನಿತ್ಯ ಸಂಚರಿಸುವ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಈ ಪ್ರದೇಶದಲ್ಲಿ ಉತ್ತಮವಾದ ರಸ್ತೆಯೊಂದನ್ನು ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಸರ್ವೇ ನಡೆಸಿ, ಡಿಸೈನ್ ತಯಾರಿಸಿ ಸಂಜೆಯೊಳಗೆ ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ತಹಸೀಲ್ದಾರ ಗಂಗಾದೇವಿ ಸಿ.ಎಚ್., ನಗರಸಭೆ ಪೌರಾಯುಕ್ತರಾದ ಸುರೇಶ ಅಂಗಡಿ ಹಾಗೂ ಇನ್ನೀತರ ಇಲಾಖೆಗಳ ಅಧಿಕಾರಿಗಳು ಇದ್ದರು.