ರೈಲ್ವೆ ವಸ್ತು ಸಂಗ್ರಹಾಲಯದಲ್ಲಿ ಎರಡು ಹೊಸ ಪ್ರತಿಮೆ ಅನಾವರಣ

ಮೈಸೂರು,ಡಿ.27 ನಗರದ ಕೆ.ಆರ್.ಎಸ್.ರಸ್ತೆಯಲ್ಲಿರುವ ರೈಲ್ವೆ ವಸ್ತು ಸಂಗ್ರಹಾಲಯದಲ್ಲಿ ಆಕರ್ಷಣೆಯ ಎರಡು ಹೊಸ ಪ್ರತಿಮೆಗಳನ್ನು ಇಂದು ಅನಾವರಣಗೊಳಿಸಲಾಯಿತು.
ಹುಬ್ಬಳ್ಳಿಯ ನೈಋತ್ಯ ವಲಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ ವಲಯ ಅಧ್ಯಕ್ಷರಾದ ಸುಜಾತಾ ಸಿಂಗ್ ಅವರು, ಭಾರತೀಯ ರೈಲ್ವೆಯಲ್ಲಿ ಅತ್ಯಂತ ಹೇರಳವಾಗಿ ಕಾಣಸಿಗುವ ಇಬ್ಬರು ರೈಲ್ವೆ ಸಂರಕ್ಷಣಾ ಪಡೆ ಸೇವೆಗಳ ಸದಸ್ಯ (ಈ ಹಿಂದೆ ಆರ್.ಪಿ.ಎಫ್.) ಮತ್ತು ಸಹಯಾಕ್ (ಈ ಮೊದಲು ಪೆÇೀರ್ಟರ್ ಎಂದು ಕರೆಯಲಾಗುತ್ತಿತ್ತು) ಅವರ ಪ್ರತಿಮೆಗಳನ್ನು ಅನಾವರಣಗೊಳಿಸಿದರು.
ಈ ಪ್ರತಿಮೆಗಳು ಬಹಳಷ್ಟು ವರ್ಷಗಳಿಂದ ರೈಲ್ವೆಗೆ ಹೇಗೆ ಗಮನಾರ್ಹವಾಗಿ ಸಹಾಯ ಮಾಡುತ್ತಿವೆ ಎಂಬುದನ್ನು ವೀಕ್ಷಕರು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ.
ಮೈಸೂರಿನ ಮಹಿಳಾ ಕಲ್ಯಾಣ ಸಂಸ್ಥೆಯ ವಿಭಾಗದ ಅಧ್ಯಕ್ಷರಾದ ಕಲಿಕ ಅಗರ್‍ವಾಲ್ ಮತ್ತು ಇತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಜೊತೆಯಲ್ಲಿ ಹುಬ್ಬಳ್ಳಿಯ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಎ.ಕೆ.ಸಿಂಗ್ ರವರು ಚಾಮರಾಜಪುರಂ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಭೇಟಿಯ ಸಂದರ್ಭದಲ್ಲಿ ರೈಲು-ಬಳಕೆದಾರರ ಅನುಕೂಲಕ್ಕಾಗಿ ನಿಲ್ದಾಣದಲ್ಲಿ ಸ್ಥಾಪಿಸಲಾದ ಗಣಕೀಕೃತ ಪ್ರಯಾಣಿಕರ ಕಾಯ್ದಿರಿಸುವ ಟಿಕೆಟ್ ವ್ಯವಸ್ಥೆಯನ್ನು (ಪಿ.ಆರ್.ಎಸ್.) ನಿಯೋಜಿಸಲಾಯಿತು. ಮೈಸೂರಿನಿಂದ ಪ್ರಯಾಣಿಕರ ಸೇವೆಗಳನ್ನು ಕ್ರಮೇಣ ಪುನರಾರಂಭಿಸಿದ ನಂತರ ಎ.ಕೆ.ಸಿಂಗ್ ರವರು ಮೈಸೂರು ರೈಲ್ವೆ ನಿಲ್ದಾಣ ಮತ್ತು ಪಿಟ್ ಲೈನ್ ಗಳನ್ನು ಪರಿಶೀಲಿಸಿದರು. ಪರಿಶೀಲನೆ ವೇಳೆ ಮೈಸೂರು ವಿಭಾಗದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಚಾಮರಾಜಪುರಂ ರೈಲ್ವೆ ನಿಲ್ದಾಣದ ಪ್ರಯಾಣಿಕರ ಕಾಯ್ದಿರಿಸುವ ಟಿಕೆಟ್ ವ್ಯವಸ್ಥೆಯು ವಾರದ ದಿನಗಳಲ್ಲಿ (ಭಾನುವಾರ ಹೊರತುಪಡಿಸಿ) ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ಮತ್ತು ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಭಾನುವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ.