ರೈಲ್ವೆ ವಲಯ ರದ್ದತಿ ವಿರೋಧಿಸಿ ವೆಲ್ಫೇರ್ ಪಾರ್ಟಿ ಪ್ರತಿಭಟನೆ

ಕಲಬುರಗಿ,ಮಾ.23:ನಗರದಲ್ಲಿನ ರೈಲ್ವೆ ವಿಭಾಗೀಯ ಕಚೇರಿಯನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಘಟಕದ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿ, ಕಲ್ಯಾಣ ಕರ್ನಾಟಕದ ಕಲಬುರ್ಗಿಯಲ್ಲಿನ ರೈಲ್ವೆ ವಿಭಾಗೀಯ ಕಚೇರಿಯನ್ನು ರದ್ದುಪಡಿಸುವ ಮೂಲಕ ಕೇಂದ್ರ ಸರ್ಕಾರ ಮೋಸ ಮಾಡಿದೆ ಎಂದು ಆರೋಪಿಸಿದರು.
2014ರಲ್ಲಿಯೇ ನಗರದಲ್ಲಿ ರೈಲ್ವೆ ವಿಭಾಗೀಯ ಕಚೇರಿ ಮಂಜೂರಾಗಿತ್ತು. ಅದು ರದ್ದುಪಡಿಸಿದ್ದು ಮೋಸದ ನೀತಿ ಎಂದು ಟೀಕಿಸಿದ ಅವರು, ಸೊಲ್ಲಾಪೂರ್ ಮತ್ತು ಸಿಕಿಂದ್ರಾಬಾದ್ ಎರಡೂ ವಲಯಗಳಿಗೆ ಹೆಚ್ಚು ಆದಾಯ ತಂದುಕೊಡುವ ಕೇಂದ್ರ ಸ್ಥಾನವೂ ಆಗಿದೆ. ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಮತ್ತು ಆರ್ಥಿಕ ನಗರಿಯಾದ ಕಲಬುರ್ಗಿಗೆ ತನ್ನದೇ ಆದ ಇತಿಹಾಸವಿದೆ. ತೊಗರಿ ಖಣಜವಾಗಿರುವ ಈ ಪ್ರದೇಶ ಸಿಮೆಂಟ್ ಸೇರಿ ಪ್ರಮುಖ ವಾಣಿಜ್ಯ ವ್ಯಾಪಾರದ ಮಾರುಕಟ್ಟೆಯಾಗಿದೆ ಎಂದರು.
371(ಜೆ) ಕಲಂ ಜಾರಿಯಾದರೂ ಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಅನುಷ್ಠಾನದ ಹಂತದಲ್ಲಿಯೇ ಇದೆ. ಹಿಂದುಳಿದ ಹಣೆಪಟ್ಟಿ ತೆಗೆದುಹಾಕುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳು ಬಹಳಷ್ಟಿವೆ. ಕೂಡಲೇ ರದ್ದಾಗಿರುವ ರೈಲ್ವೆ ವಲಯವನ್ನು ಮಂಜೂರು ಮಾಡುವ ಮೂಲಕ ಕಲ್ಯಾಣ ಕರ್ನಾಟಕದ ಜನತೆಗೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಸಲೀಂ ಅಹ್ಮದ್ ಚಿತ್ತಾಪೂರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ಸಿದ್ದಣ್ಣ ಚಕ್ರ, ಪ್ರಧಾನ ಕಾರ್ಯದರ್ಶಿ ಮುಬೀನ್ ಅಹ್ಮದ್, ದಕ್ಷಿಣ ವಲಯದ ಪ್ರಕಾಶ್ ಪಾಟೀಲ್, ನಗರ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲೀಂ ಸಗರಿ, ನಗರ ಅಧ್ಯಕ್ಷ ಮುನೀರ್ ಹಾಶಮಿ, ಉತ್ತರ ವಲಯದ ಪ್ರಧಾನ ಕಾರ್ಯದರ್ಶಿ ಅಫಜಲಖಾನ್ ಮುಂತಾದವರು ಪಾಲ್ಗೊಂಡಿದ್ದರು.