ರೈಲ್ವೆ ಮೇಲ್ಸೇತುವೆ ನಿರ್ಮಾಣ: ಅಕ್ಟೋಬರ್ ಅಂತ್ಯಕ್ಕೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳ ನಿರ್ದೇಶನ

ವಿಜಯಪುರ, ಆ.4-ನಗರದ ಇಬ್ರಾಹಿಂಪೂರ ರೈಲ್ವೆಗೇಟ್ ಎಲ್‍ಸಿನಂ 81ರ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಆಗಸ್ಟ್ 2ರಂದು ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ವಿಜಯಪುರ-ಬೆಂಗಳೂರು ರಸ್ತೆ ಮೇಲಿನ ಸಂಚಾರ ದಟ್ಟಣೆ ಹಾಗೂ ಸುಗಮ ಸಂಚಾರ ದೃಷ್ಟಿಯಿಂದ ನಗರದ ಇಬ್ರಾಹಿಂಪೂರ ನಗರದ ಈ ರೈಲ್ವೆ ಸೇತುವೆಯನ್ನು ಜರೂರಾಗಿ ನಿರ್ಮಾಣ ಮಾಡುವುದು ಅತೀ ಅವಶ್ಯವಿದೆ. ಈ ಹಿಂದೆ ನಡೆದ ಸಭೆಯಲ್ಲಿ ಸದರಿ ಕಾಮಗಾರಿ ಕುರಿತು ಚರ್ಚಿಸಿದಂತೆ ಮತ್ತು ಸೂಕ್ತ ಬದಲಾವಣೆ ಮತ್ತು ಇತ್ಯಾದಿ ಅಳವಡಿಸಿ ಯೋಜನಾ ನಕ್ಷೆ ಪರಿಷ್ಕರಿಸಿಕೊಳ್ಳಲು ಈ ಹಿಂದೆ ಸೂಚಿಸಿದಂತೆ ಕಾಮಗಾರಿಯನ್ನು ನಡೆಸಬೇಕು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸದರಿ ಕಾಮಗಾರಿಯನ್ನು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ರೈಲ್ವೆ ಅಧಿಕಾರಿಗಳಿಗೆ ಗುಡುವು ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರು, ಲೋಕೋಪಯೋಗಿ ಬಂದರು ಒಳನಾಡು ಜಲಸಾರಿಗೆ ಇಲಾಖೆ, ಕರ್ನಾಟಕ ನಗರ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ಹಾಗೂ ದಕ್ಷಿಣ ಪಶ್ಚಿಮ ರೈಲ್ವೆಯ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಇತರರು ಇದ್ದರು.