ರೈಲ್ವೆ ಪ್ಲಾಟ್‌ಫಾರ್ಮ್ ದರ ಹೆಚ್ಚಳಕ್ಕೆ ಖಂಡನೆ;ಪ್ರತಿಭಟನೆ

     
  ದಾವಣಗೆರೆ.ನ.೬; ದಾವಣಗೆರೆ ಸೇರಿದಂತೆ ರಾಜ್ಯದಾದ್ಯಂತ ರೈಲ್ವೆ ನಿಲ್ದಾಣಗಳಲ್ಲಿನ ಪ್ಲ್ಯಾಟ್‌ಫಾರ್ಮ್ ಟಿಕೆಟ್ ಶುಲ್ಕ ಹೆಚ್ಚಳ ಹಾಗೂ ದಾವಣಗೆರೆ ಮಾರ್ಗವಾಗಿ ಪ್ರತಿದಿನ ಹುಬ್ಬಳ್ಳಿ ಯಿಂದ ಬೆಂಗಳೂರು, ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಂಚರಿಸುವ ಪ್ಯಾಸೆಂಜರ್ ರೈಲುಗಳನ್ನು ಎಕ್ಸ್‌ಪ್ರೆಸ್ ಆಗಿ ಮಾಡಿರುವುದನ್ನು ಖಂಡಿಸಿ ರೈಲ್ವೇ ಖಾಸಗೀಕರಣ ವಿರೋಧಿ ಅಭಿಯಾನ - ಕರ್ನಾಟಕದ ದಾವಣಗೆರೆ ಘಟಕದ ಕಾರ್ಯಕರ್ತರು  ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ’ಸಮಿತಿಯ’ ಕಾರ್ಯಕರ್ತರಾದ ತಿಪ್ಪೇಸ್ವಾಮಿ ಅಣಬೇರು ಅವರು ಮಾತನಾಡುತ್ತಾ, ಕೋವಿಡ್ -೧೯ ಸಾಂಕ್ರಾಮಿಕ ರೋಗವು ಸಾಮಾನ್ಯ ಜನರ ಜೀವನವನ್ನು ಶೋಚನೀಯಗೊಳಿಸಿದೆ. ತೀವ್ರ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿರುವ ಬಹುಪಾಲು ಸಾಮಾನ್ಯ ಜನರು ರೈಲ್ವೆಯ ಮೇಲೆ ಅವಲಂಬಿತರಾಗಿದ್ದಾರೆ. ಇಂತಹ ಕಷ್ಟಕರ ಪರಿಸ್ಥಿಯಲ್ಲೂ ಸಹ ದಾವಣಗೆರೆಯ ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್ ಟಿಕೆಟ್ ಶುಲ್ಕವನ್ನು ರೂ. ೫೦ಕ್ಕೆ ಹೆಚ್ಚಿಸುವ ಈ ನಿರ್ಧಾರವು ಸ್ವೀಕಾರ್ಹವಲ್ಲ. ಅಲ್ಲದೆ ಪ್ರತಿದಿನ ಹುಬ್ಬಳ್ಳಿಯಿಂದ ಬೆಂಗಳೂರಿಗೆ ದಾವಣಗೆರೆ ಮಾರ್ಗವಾಗಿ ಸಂಚರಿಸುವ ಪ್ಯಾಸೆಂಜರ್ ರೈಲುಗಳನ್ನು ಎಕ್ಸ್‌ಪ್ರೆಸ್ ಆಗಿ ಪರಿವರ್ತಿಸಿರುವುದರಿಂದ ಇದೇ ದಾವಣಗೆರೆ ಸುತ್ತ-ಮುತ್ತ ಇರುವ ಕೊಡಗನೂರು, ತೋಳಹುಣಸೆ, ಹನುಮನಹಳ್ಳಿ, ಮಾಯಕೊಂಡ, ಸಾಸಲು ಈ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ, ಆಗ ಆ ಭಾಗದ ಜನಸಾಮಾನ್ಯರು, ಅಂಗವಿಕಲರು, ಉದ್ಯೋಗಿಗಳು, ವಿದ್ಯಾರ್ಥಿಗಳು, ವೃದ್ದರು ರೈಲು ಸೌಲಭ್ಯದಿಂದ ವಂಚಿತರಾಗುತ್ತಾರೆ. 
ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಕ್ರಮವು ಜನ ವಿರೋಧಿ, ಏಕೆಂದರೆ ರೈಲ್ವೆಯ ಮೇಲೆ ಅವಲಂಬಿತವಾಗಿರುವ ಟೀ-ಕಾಫಿ, ಮಂಡಕ್ಕಿ, ಚಿಪ್ಸ್, ಹಣ್ಣುಗಳು ಇನ್ನಿತರೆ ತಿನಿಸು-ಪಾನೀಯಗಳ ಚಿಲ್ಲರೆ ವ್ಯಾಪಾರಸ್ಥರು, ಬಡವರು ಬೀದಿಪಾಲಾಗುತ್ತಾರೆ ಎಂದು ಹೇಳಿದರು. ಪ್ಲಾಟ್‌ಫಾರ್ಮ್ ಟಿಕೆಟ್ ಶುಲ್ಕವನ್ನು ರೂ. ೫೦ರಿಂದ ಮತ್ತೆ ಹಳೆಯ ಶುಲ್ಕ ರೂ. ೧೦ಕ್ಕೆ ಈ ಕೂಡಲೇ ಇಳಿಸಿ, ಈ ಮೊದಲು ಪ್ಯಾಸೆಂಜರ್ ರೈಲುಗಳು ಸಂಚರಿಸುವಂತೆ ಮುದುವರೆಯಬೇಕು ಎಂದು ಒತ್ತಾಯಿಸಿದರು.  ಪ್ರತಿಭಟನೆಯಲ್ಲಿ ಭಾರತಿ, ಡಾ. ಸುನೀತ್ ಕುಮಾರ್, ಮಂಜುನಾಥ್ ಕೈದಾಳೆ, ಹಿರೇಮಠ್ ಎಂ ಆರ್,  ಮಂಜುನಾಥ್ ಕುಕ್ಕುವಾಡ, ಭಾರತಿ, ನಾಗಜ್ಯೋತಿ, ಕಾವ್ಯ, ಪುಷ್ಪ, ಜ್ಯೋತಿ ಕುಕ್ಕುವಾಡ, ಟಿ ವಿ ಎಸ್ ರಾಜು, ಮಧು ತೊಗಲೇರಿ, ಸ್ಮಿತಾ, ಲಕ್ಷ್ಮಣ್ ಢಾಗೆ, ಇನ್ನಿತರರು ಭಾಗವಹಿಸಿದ್ದರು.