ರೈಲ್ವೆ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್

ಹೊಸಪೇಟೆ ಮಾ30: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ರೈಲ್ವೆ ಪ್ರಯಾಣಿಕರನ್ನು ರೈಲ್ವೆ ನಿಲ್ದಾಣದಲ್ಲಿ ಸೋಮವಾರ ದಿಂದ ಕಡ್ಡಾಯ ಥರ್ಮಲ್ ಸ್ಕ್ರೀನಿಂಗ್ ಒಳಪಡಿಸುವ ಕಾರ್ಯ ಆರಂಭಿಸಲಾಯಿತು.
ಜ್ವರ, ನೆಗಡಿ, ಕೆಮ್ಮಿನ ಲಕ್ಷಣಗಳಿದ್ದ ವ್ಯಕ್ತಿಗಳು ಕಂಡು ಬಂದರೆ ಆರೋಗ್ಯ ಇಲಾಖೆ ಅವರ ಸ್ವ್ಯಾಬ್ ಸಂಗ್ರಹಿಸಿ ತಪಾಸಣೆಗೆ ರವಾನಿಸುವ ಮೂಲಕ ಪ್ರಯಾಣಿಕರ ಆನುಕೂಲ ಹಾಗೂ ಕರೋನಾ ಮಹಾಮಾರಿ ಹರಡದಂತೆ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.
ನಗರದ ರೈಲ್ವೆ ನಿಲ್ದಾಣದ ಲೋಕೋ ಪೈಲೆಟ್ (ಚಾಲಕರು)ಗಳಿಂದ ಮತ್ತೆ ಕೊರೋನಾ ಕಾಣಿಸಿಕೊಂಡಿದೆ. ಕೊರೋನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯ ಸೇರಿ ರಾಜಧಾನಿ ಬೆಂಗಳೂರಿನಿಂದ ಆಗಮಿಸುವ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಈ ಮೂಲಕ ಆರೋಗ್ಯ ಇಲಾಖೆ ಕೊರೋನಾ ವೈರಸ್‍ನ ಕೊಂಡಿ ಕಳಚಲು ಪ್ರತಿ ಪ್ರಯಾಣಿಕರಿಗೂ ತಪಾಸಣೆ ಮಾಡಲು ಮುಂದಾಗಿದೆ.
ಹೊಸಪೇಟೆಯಲ್ಲಿ ಮಾರ್ಚ್ ಮೊದಲ ವಾರದಿಂದ ಕೊರೋನಾ ಪ್ರಕರಣ ಹೆಚ್ಚಳವಾಗಿದ್ದು, 100ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಸದ್ಯ 49 ಸಕ್ರಿಯ ಪ್ರಕರಣಗಳಿವೆ. ಹೀಗಾಗಿ ನಗರದ ರೈಲ್ವೆ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ.