ರೈಲ್ವೆ ನಿಲ್ದಾಣಗಳ ಮೇಲ್ದರ್ಜೆಗೆ 135 ಕೋಟಿ ಬಡುಗಡೆ; ಮುನಿಸ್ವಾಮಿ

ಕೆಜಿಎಫ್,ಆ.೧೬- ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಸರ್ಕಾರ ರೈಲ್ವೆ ಇಲಾಖೆಯಲ್ಲಿ ವಂದೇ ಭಾರತ್ ರೈಲಿನಿಂದ ಹಿಡಿದು ಹಲವಾರು ದಾಖಲೆಗಳನ್ನು ಮಾಡಿದ್ದು, ಕೋಲಾರ ಲೋಕಸಭಾ ವ್ಯಾಪ್ತಿಯ ಎಲ್ಲ ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಸುಮಾರು ೧೩೫ ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ಮಾರಿಕುಪ್ಪಂ-ಕುಪ್ಪಂ ನಡುವೆ ನಡೆಯುತ್ತಿರುವ ನೂತನ ರೈಲ್ವೆ ಹಳಿ ನಿರ್ಮಾಣ ಕಾಮಗಾರಿ ವೀಕ್ಷಿಸಿ ಮಾತನಾಡಿ, ಹಲವಾರು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಮಾರಿಕುಪ್ಪಂ-ಕುಪ್ಪಂ ನಡುವಿನ ನೂತನ ರೈಲ್ವೆ ಹಳಿ ನಿರ್ಮಾಣ ಕಾಮಗಾರಿಗೆ ೨೦೦ ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿ, ಈಗಾಗಲೇ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ವೇಗವನ್ನು ಮತ್ತಷ್ಟು ಚುರುಕುಗೊಳಿಸಲು ರೈಲ್ವೆ ಇಲಾಖೆ ಜನರಲ್ ಮ್ಯಾನೇಜರ್, ಅಧಿಕಾರಿಗಳು, ಗುತ್ತಿಗೆದಾರರು, ಇಂಜಿನಿಯರ್‌ಗಳಿಗೆ ನಾಳೆ ಸಭೆ ಕರೆಯಲಾಗಿದೆ ಎಂದರು.
ಎಲ್ಲೆಲ್ಲೆ ಕಾಮಗಾರಿ ನಡೆಯುತ್ತಿದೆ, ಎಲ್ಲೆಲ್ಲಿ ಆಡಚಣೆಯಾಗಿದೆ, ನಿರ್ಮಾಣ ಕಾಮಗಾರಿಗೆ ಇರುವಂತಹ ತೊಡಕುಗಳೇನು ಎಂಬಿತ್ಯಾದಿಗಳ ಬಗ್ಗೆ ಚರ್ಚೆ ನಡೆಸಿ ಮುಂದಿನ ಸಂಸತ್ ಚುನಾವಣೆಗೂ ಮುನ್ನವೇ ಮಾರಿಕುಪ್ಪಂ-ಕುಪ್ಪಂ ಮಾರ್ಗವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದರು.
ಮಾಲೂರಿನಲ್ಲಿ ರೈಲ್ವೆ ಫ್ಲೈಓವರ್ ನಿರ್ಮಾಣಕ್ಕೆ ಸಿಆರ್‌ಎಫ್ ನಿಧಿಯಲ್ಲಿ ೩೧ ಕೋಟಿ ರೂಗಳನ್ನು, ಟೇಕಲ್‌ನಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ೨೬ ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಅಲ್ಲದೇ ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಎಕ್ಸಲೇಟರ್, ಮಾರಿಕುಪ್ಪಂ, ಉರಿಗಾಂ, ಬಿಸಾನತ್ತಂ ನಿಲ್ದಾಣಗಳಲ್ಲಿ ಶೌಚಾಲಯ, ವಿದ್ಯುತ್ ದೀಪಗಳು, ಸಿಸಿ ಕ್ಯಾಮೆರಾ, ಪ್ಲಾಟ್ ಫಾರಂಗಳು ಸೇರಿದಂತೆ ಎಲ್ಲ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗಿದೆ ಎಂದರು.
ಶತಮಾನಗಳ ಇತಿಹಾಸವಿರುವ ಬಿಜಿಎಂಎಲ್ ಕಟ್ಟಡಗಳನ್ನು ಸ್ಥಳೀಯವಾಗಿ ಯಾರಿಗೂ ಹಸ್ತಾಂತರ ಮಾಡದೇ ಗೋಲ್ಡನ್ ಸಫಾರಿಯನ್ನಾಗಿ ಪರಿವರ್ತಿಸಿ, ಪ್ರವಾಸೋದ್ಯಮ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಇತ್ತೀಚೆಗೆ ನಡೆದ ಸಂಸತ್ ಅಧಿವೇಶನದಲ್ಲಿ ಪ್ರಧಾನ ಮಂತ್ರಿಗಳಿಗೆ ಮತ್ತು ರೈಲ್ವೆ ಸಚಿವರಿಗೆ ಮನವಿ ಪತ್ರ ನೀಡಿರುವುದಾಗಿ ಹೇಳಿದರು.
ಚಿನ್ನದ ಗಣಿಗೆ ಸಂಬಂಧಿಸಿದಂತೆ ಕೆಜಿಎಫ್ ನಲ್ಲಿರುವ ಹಳೆ ಕಟ್ಟಡಗಳು, ಕಾರ್ಖಾನೆ, ಚಿನ್ನದ ಶುದ್ಧೀಕರಣ ಘಟಕ ಇತ್ಯಾದಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತಂತೆ ಗಣಿ ಸಚಿವಾಲಯದ ಕಾರ್ಯದರ್ಶಿ ಮತ್ತು ಅಧಿಕಾರಿಗಳೊಂದಿಗೆ ಮುಂದಿನ ಬುಧವಾರ ರೈಲ್ವೆ ಸಚಿವರು ದೆಹಲಿಯಲ್ಲಿ ಚರ್ಚೆ ನಡೆಸಲಿದ್ದಾರೆ ಎಂದರು.
ಬಿಜಿಎಂಎಲ್ ಮನೆಗಳ ಸರ್ವೇ ಕಾರ್ಯ ನಡೆಯುತ್ತಿದ್ದು, ಒಂದೂವರೆ ತಿಂಗಳಲ್ಲಿ ಸರ್ವೇ ಕಾರ್ಯ ಮುಗಿಯುತ್ತಿದ್ದಂತೆ ಅತಿ ಶೀಘ್ರದಲ್ಲಿ ಈ ಹಿಂದೆ ಹಣವನ್ನು ಕಟ್ಟಿದ್ದಂತಹ ಬಿಜಿಎಂಎಲ್‌ನ ೨೮೦೦ ಮಂದಿ ನಿವೃತ್ತ ಕಾರ್ಮಿಕರ ಮನೆಗಳಿಗೆ ಕೇಂದ್ರ ರೈಲ್ವೆ ಸಚಿವ ಪ್ರಹ್ಲಾದ ಜೋಶಿಯವರೇ ಹಕ್ಕುಪತ್ರ ವಿತರಿಸಲಿದ್ದಾರೆ.
ಎಸ್‌ಟಿಬಿಪಿ ಯೋಜನೆಯಡಿ ೨೮೦೦ ಮಂದಿಯನ್ನು ಹೊರತುಪಡಿಸಿ ಮೈನಿಂಗ್ ಪ್ರದೇಶದಲ್ಲಿ ಸುಮಾರು ೧೦ ರಿಂದ ೧೪ ಸಾವಿರ ಮಂದಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದು, ಅವರಿಗೂ ಯಾವುದೇ ಕಾರಣಕ್ಕೂ ತೊಂದರೆಯಾಗದ ರೀತಿಯಲ್ಲಿ ಪತ್ರಗಳನ್ನು ಕೊಡಲು ಕ್ರಮ ವಹಿಸಲಾಗುವುದು ಎಂದರು.
ಚಿನ್ನದ ಗಣಿ ನಡೆಯುತ್ತಿದ್ದ ಅವಧಿಯಲ್ಲಿ ಇದ್ದಂತಹ ಗತ ವೈಭವ ಕೆಜಿಎಫ್‌ಗೆ ಮತ್ತೆ ತಂದುಕೊಡಲು ಅಗತ್ಯವಾದ ಎಲ್ಲ ಕಾರ್ಯಗಳನ್ನು ಮಾಡಲಾಗುವುದು. ಈ ಹಿಂದೆಯೇ ರಾಜ್ಯ ಸರ್ಕಾರದಿಂದ ಬಿಜಿಎಂಎಲ್ ವಶದಲ್ಲಿರುವ ಸುಮಾರು ೩ ಸಾವಿರ ಎಕರೆ ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದೆ, ಮುಂದಿನ ೨೦೨೪ರ ಜನವರಿಯಲ್ಲಿ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಕಾರಿಡಾರ್ ನಿರ್ಮಾಣ ಕಾಮಗಾರಿ ಪೂರ್ಣವಾಗುತ್ತಿದ್ದಂತೆ, ಕೇಂದ್ರ ಸರ್ಕಾರದಿಂದಲೇ ಇಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣ ಕಾಮಗಾರಿ ಮಾಡಲಾಗುವುದು ಎಂದು ತಿಳಿಸಿದರು,
ಸ್ಥಳೀಯ ಶಾಸಕರು ಮತ್ತು ಈ ಹಿಂದೆ ಸಂಸದರಾಗಿದ್ದಂತಹ ಅವರ ತಂದೆ ಹಿಂದೆಯಿಂದಲೂ ಯಾವುದೇ ಕೆಲಸಗಳನ್ನು ಮಾಡಿಲ್ಲ. ಆದರೂ ತೋರ್ಪಡಿಕೆಗೋಸ್ಕರ ಬಿಜಿಎಂಎಲ್‌ನಲ್ಲಿ ನಿಂತುಕೊಳ್ಳುವುದು, ಮೀಟಿಂಗ್‌ಗಳನ್ನು ನಡೆಸುವುದನ್ನು ಮಾಡುತ್ತಿದ್ದಾರೆ. ಇವರ ಅಧಿಕಾರಾವಧಿಯಲ್ಲಿ ಜನರಿಗೆ ಅನುಕೂಲವಾಗುವಂತಹ ಯಾವುದೇ ಕೆಲಸಗಳನ್ನು ಮಾಡಿಲ್ಲ. ಇಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದು ಕೇಂದ್ರ ಸರ್ಕಾರವೇ ಹೊರತೂ ರಾಜ್ಯ ಸರ್ಕಾರವಲ್ಲ ಎಂದು ವಾಗ್ದಾಳಿ ನಡೆಸಿದರು.