ರೈಲ್ವೆ ನಿಲ್ದಾಣಕ್ಕೆ ಬಸವೇಶ್ವರರ ಹೆಸರಿಡಲು ಕರವೇ ಒತ್ತಾಯ

ದಾವಣಗೆರೆ,ಮಾ.22: ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ವಿಶ್ವಗುರು, ಜಗಜ್ಯೋತಿ ಬಸವೇಶ್ವರ ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 12ನೇ ಶತಮಾನದಲ್ಲಿ ಕನ್ನಡಿಗರನ್ನು ಒಗ್ಗೂಡಿಸಿದ ಮತ್ತು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಜಗಜ್ಯೋತಿ ಬಸವಣ್ಣನವರ ಹೆಸರು ಮತ್ತು ಅವರ ವಿಚಾರಧಾರೆಯನ್ನು ಮುಂದಿನ ಪೀಳಿಗೆಗೆ ಸಾರಲು ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ನಾಮಕಾರಣ ಮಾಡಬೇಕು ಎಂದು ಒತ್ತಾಯಿಸಿದರು.ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾಗಿದ್ದ ರೈಲ್ವೆ ನಿಲ್ದಾಣದ ಕಟ್ಟಡ ತೆರವು ಗೊಳಿಸಿ, ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನ ತಂದು ಒಂದೇ ವರ್ಷದಲ್ಲಿ ನವೀಕೃತ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿರುವ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಕಾರ್ಯ ಅತ್ಯಂತ ಶ್ಲಾಘನಿಯವಾಗಿದ್ದು, ಅವರಿಗೆ ಕರವೇ ಅಭಿನಂದಿಸಿ, ಇಂದು ಸನ್ಮಾನ ಸಹ ಮಾಡಲಾಗುವುದು ಎಂದು ಹೇಳಿದರು.ರೈಲ್ವೆ ನಿಲ್ದಾಣದ ಹೊರಾಂಗಣ ಮತ್ತು ಒಳಾಂಗಣದಲ್ಲಿ ಕನ್ನಡ ನಾಮ ಫಲಕ ಅಳವಡಿಸುವ ಮೂಲಕ ಕನ್ನಡ ವಾತಾವರಣ ನಿರ್ಮಿಸಬೇಕು. ರೈಲ್ವೆ ಟಿಕೆಟ್‌ಗಳಲ್ಲಿ ಮತ್ತು ರಿಸರ್‌ವೇಷನ್ ಅರ್ಜಿಗಳನ್ನು ಕನ್ನಡದಲ್ಲಿ ಮುದ್ರಿಸಬೇಕು. ರೈಲ್ವೆ ನಿಲ್ದಾಣದಲ್ಲಿರುವ ಉತ್ತರ ಭಾರತೀಯರನ್ನು ಅನ್ಯ ರಾಜ್ಯಗಳಿಗೆ ವರ್ಗಾವಣೆ ಮಾಡಿ ಕನ್ನಡಿಗರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.ರೈಲ್ವೆ ನಿಲ್ದಾಣದಲ್ಲಿ ಉತ್ತರ ಭಾರತಕ್ಕೆ ಸೇರಿರುವ ವ್ಯಕ್ತಿ ಆರಂಭಿಸಿರುವ ಕ್ಯಾಂಟೀನ್‌ನಲ್ಲಿ ದುಪ್ಪಟ್ಟು ದರಕ್ಕೆ ಆಹಾರ ಪದಾರ್ಥ ಮಾರಟ ಮಾಡುವ ಮೂಲಕ ರೈಲ್ವೆ ಪ್ರಯಾಣಿಕರ ಸುಲಿಗೆ ಮಾಡುತ್ತಿದ್ದಾರೆ. ಆದ್ದರಿಂದ ರೈಲ್ವೆ ನಿಲ್ದಾಣದಲ್ಲಿ ಕನ್ನಡಿಗರು ಹೋಟೆಲ್ ಆರಂಭಿಸಲು ಅನುಮತಿ ನೀಡಿ, ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಇಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಸ್ಟೇಷನ್ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ಕರವೇ ಜಿಲ್ಲಾ ಗೌರವಾಧ್ಯಕ್ಷ ವಾಸುದೇವ ರಾಯ್ಕರ್, ಮುಖಂಡರಾದ ಗೋಪಾಲ್ ದೇವರಮನಿ, ಡಿ.ಮಲ್ಲಿಕಾರ್ಜುನ, ಬಸಮ್ಮ, ಕೆ.ಜಿ.ಬಸವರಾಜು, ಎಂ.ಡಿ.ರಫಿಕ್, ಧರ್ಮರಾಜ್, ಪರಮೇಶ್ವರ, ಖಾದರ್, ಸಂತೋಷ ಹಾಜರಿದ್ದರು.