ರೈಲ್ವೆ ಒಳಸೇತುವೆ ನಿರ್ಮಿಸಲು ಒತ್ತಾಯ

ವಾಡಿ,ಜ.13: ಪಟ್ಟಣದ ರೈಲು ನಿಲ್ದಾಣ ಪ್ರದೇಶದ ರೈಲು ಹಳಿ ಮಾರ್ಗಕ್ಕೆ ಒಳ ಸೇತುವೆ ನಿರ್ಮಿಸುವಂತೆ ಆಗ್ರಹಿಸಿ ಜನ ಧ್ವನಿ ಜಾಗೃತ ಸಮಿತಿ ಪದಾಧಿಕಾರಿಗಳು ಸೆಂಟ್ರಲ್ ರೈಲ್ವೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಸಮಿತಿಯ ಗೌರವಾಧ್ಯಕ್ಷ ವಿ.ಕೆ ಕೆದಿಲಿಯಾ ಮಾತನಾಡಿ, ಏಳು ದಶಕಗಳ ನಂತರ ಕೇಂದ್ರ ಸರ್ಕಾರ ವಾಡಿ ರೈಲು ನಿಲ್ದಾಣ ಜೀರ್ಣೋದ್ಧಾರಕ್ಕೆ ಮುಂದಾಗಿದೆ. ಇದಕ್ಕಾಗಿ ಸಮರ್ಪಕ ಪ್ರಮಾಣದ ಅನುದಾನ ಬಿಡುಗಡೆ ಮಾಡಲಾಗಿದೆ. ನೂತನ ಪ್ಲಾಟ್ ಫಾರ್ಮ್-5ರ ಕಾಮಗಾರಿ ಭರದಿಂದ ಸಾಗಿದೆ. ಇನ್ನೊಂದೆಡೆ, ರೈಲು ನಿಲ್ದಾಣದ ಹಳೆ ಮಾರ್ಗದ ಎಡ ಮತ್ತು ಬಲ ಭಾಗದ ಬಡಾವಣೆಗಳಾದ ಹನುಮಾನ ನಗರ, ವಿಜಯ ನಗರ, ಇಂದಿರಾ ನಗರ ಬಡಾವಣೆಯ ನಿವಾಸಿಗಳು ಹಾಗೂ ಮಕ್ಕಳು ಶಾಲೆಗೆ ಹೋಗಿ ಬರಲು ತೊಂದರೆಯಾಗುತ್ತಿದೆ. ಆದಕಾರಣ ರೈಲ್ವೆ ಒಳ ಸೇತುವೆ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಮನದಟ್ಟು ಮಾಡಿಕೊಡಲಾಯಿತು. ಇದೇವೇಳೆ, ಸೊಲ್ಲಾಪುರದ ಸೆಂಟ್ರಲ್ ರೈಲ್ವೆ ಡಿ.ಆರ್.ಎಂ
ಅವರಿಗೆ ಬರೆದ ಮನವಿ ಪತ್ರವನ್ನು ರೈಲ್ವೆ ನಿಲ್ದಾಣದ ಡೆಪ್ಯುಟಿ ಮ್ಯಾನೇಜರ್ ವಿವೇಕ್ ಕುಮಾರ್ ಅವರಿಗೆ ಸಲ್ಲಿಸಲಾಯಿತು.
ಜನ ಧ್ವನಿ ಜಾಗೃತಿ ಸಮಿತಿಯ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ., ಶಿವಲಿಂಗ ಹಳ್ಳಿಕಾರ, ಸಿದ್ದಯ್ಯಶಾಸ್ತ್ರಿ ಬಲರಾಮಚೌಕ, ಶಿವಲಿಂಗ ಜೋಗಿಮಟ್ಟ, ಜಾನ್ ವೆಲ್ಲಿಂಗ್, ಶಿವಪ್ಪ ಮುಂಡರಗಿ ಯೂಸುಫ್ ಮುಲ್ಲಾ ಕಮರಡಗಿ,ದೇವೇಂದ್ರ ದೊಡ್ಡಮನಿ ಮಡಿವಾಳ ಬಿದನೂರ, ಮಹಾಂತೇಶ್ ಬಿರಾದಾರ, ಸುರೇಶ್ ಕುಲಕರ್ಣಿ, ರಾಯಪ್ಪ ಕೊಟಗಾರ್, ಮೊಹ್ಮದ್ ಸಲಾವುದ್ದೀನ್ ಸೇರಿದಂತೆ ಇನ್ನಿತರರು ಇದ್ದರು.