ರೈಲ್ಚೆ ಯೋಜನೆ ತ್ವರಿತ ಅನುಷ್ಟಾನಕ್ಕೆ ಅಧಿಕಾರಿಗಳ ತಂಡ ರಚನೆಗೆ ಸಿಎಂ- ರೈಲ್ವೆ ಸಚಿವರು ನಿರ್ಧಾರ

ಬೆಂಗಳೂರು, ನ.19- ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವ ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ತಂಡ ರಚಿಸಲು ನಿರ್ದರಿಸಲಾಗಿದೆ.

ರಾಜ್ಯದಲ್ಲಿ ಕೇಂದ್ರ ಸರ್ಕಾರದೊಂದಿಗೆ 50:50 ವೆಚ್ಚ ಹಂಚಿಕೆ ಆಧಾರದಲ್ಲಿ 9 ಹೊಸ ರೈಲು ಮಾರ್ಗ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಯೋಜನೆಗಳ ಪ್ರಗತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಪರಿಶೀಲಿಸಿದರು

ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಉತ್ತಮ ಸಮನ್ವಯ ಸಾಧಿಸುವ ಹಾಗೂ ತೊಡಕುಗಳನ್ನು ತ್ವರಿತವಾಗಿ ನಿವಾರಿಸುವ ಉದ್ದೇಶದಿಂದ ಅಧಿಕಾರಿಗಳ ತಂಡ ರಚಿಸುವುದಾಗಿ ಅವರು ತಿಳಿಸಿದರು.

ರೈಲ್ವೆ ಯೋಜನೆಗಳಿಗೆ ಅಗತ್ಯವಿರುವ ಭೂಸ್ವಾಧೀನಕ್ಕೆ ಮೊದಲ ಆದ್ಯತೆ ನೀಡುವಂತೆ ಸೂಚಿಸಿದ ಮುಖ್ಯಮಂತ್ರಿಗಳು, ಅತಿ ಹೆಚ್ಚು ಬೇಡಿಕೆಯ ಹಾಗೂ ತ್ವರಿತವಾಗಿ ಪೂರ್ಣಗೊಳಿಸಲು ಸಾಧ್ಯವಿರುವ ಯೋಜನೆಗಳಿಗೆ ಆದ್ಯತೆಯ ಮೇರೆಗೆ ಭೂಸ್ವಾಧೀನ ಮಾಡುವಂತೆ ತಿಖಿಸಿದ್ದಾರೆ.

9 ರೈಲ್ವೆ ಯೋಜನೆಗಳಿಗೆ ಒಟ್ಟು 15 ಸಾವಿರ ಎಕರೆ ಭೂಮಿಯ ಅಗತ್ಯವಿದ್ದು, ಈ ವರೆಗೆ 9000 ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. 6000 ಎಕರೆ ಭೂಸ್ವಾಧೀನ ಮಾಡಿಕೊಡಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರೈಲ್ವೆ ಇಲಾಖೆ ಹಾಗೂ ರಾಜ್ಯ ಸರ್ಕಾರಗಳು ರೈಲ್ವೆ ಯೋಜನೆಗಳಿಗೆ ಪರಸ್ಪರ ಪೂರಕವಾಗಿ ಅನುದಾನ ಬಿಡುಗಡೆ ಮಾಡಬೇಕು. ಸಕಾಲದಲ್ಲಿ ಅನುದಾನ ಬಿಡುಗಡೆ ಮಾಡುವುದರಿಂದ ನಿಗದಿತ ಕಾಲಾವಧಿಯಲ್ಲಿ ಯೋಜನೆ ಪೂರ್ಣಗೊಳಿಸಲು ಸಾಧ್ಯ ಎಂದು ಮಾಹಿತಿ ನೀಡಿದ್ದಾರೆ.

ಸಮನ್ವಯ ಅಗತ್ಯ’

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ರೈಲ್ವೆ ಯೋಜನೆಗಳ ತ್ವರಿತ ಅನುಷ್ಠಾನ ನಮ್ಮ ಆದ್ಯತೆಯಾಗಿದೆ. ಇದಕ್ಕಾಗಿ ಹೆಚ್ಚಿನ ಸಮನ್ವಯದೊಂದಿಗೆ ರಾಜ್ಯ ಸರ್ಕಾರ ಹಾಗೂ ರೈಲ್ವೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.

ಭೂಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಿರುವ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗದಗ –ವಾಡಿ, ರಾಯದುರ್ಗ- ತುಮಕೂರು, ಗಿಣಿಗೇರಾ- ರಾಯಚೂರು, ತುಮಕೂರು- ಚಿತ್ರದುರ್ಗ- ದಾವಣಗೆರೆ, ಬಾಗಲಕೋಟೆ- ಕುಡಚಿ, ಕಡೂರು-ಚಿಕ್ಕಮಗಳೂರು-ಬೇಲೂರು, ಹಾಸನ – ಬೇಲೂರು, ಶಿವಮೊಗ್ಗ ರಾಣೆಬೆನ್ನೂರು, ಮಾರಿಕುಪ್ಪಂ-ಕುಪ್ಪಂ, ಬೆಳಗಾವಿ-ಧಾರವಾಡ ಮೊದಲಾದ ಹೊಸ ರೈಲು ಮಾರ್ಗಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಇದರೊಂದಿಗೆ ಬೆಂಗಳೂರು ಸಬ್ ಅರ್ಬನ್ ರೈಲು ಮಾರ್ಗ, ರೈಲು ಮಾರ್ಗಗಳ ವಿದ್ಯುದೀಕರಣ ಮೊದಲಾದ ವಿಷಯಗಳ ಕುರಿತು ಸಹ ಚರ್ಚಿಸಲಾಯಿತು.