
ಶಹಾಬಾದ:ಆ.4:ಭಾನುವಾರ ನಗರದ ರೈಲು ನಿಲ್ದಾಣದ ನವೀಕರಣ ಕಾಮಗಾರಿ ಉದ್ಘಾಟನೆ ಸಮಾರಂಭವನ್ನು ಶಹಾಬಾದ ಅಭಿವೃದ್ದಿ ಹೋರಾಟ ಸಮಿತಿ ವತಿಯಿಂದ ಭಹಿಷ್ಕರಿಸಲು ಗುರುವಾರ ನಡೆದ ಸಭೆಯಲ್ಲಿ ಚಿಂತನೆ ನಡೆಸಲಾಯಿತು.
ನಗರ ಪ್ರವಾಸಿ ಮಂದಿರದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಮಹ್ಮದ ಉಬೇದುಲ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನವೀರಕರಣ ಕಾಮಗಾರಿ ಉದ್ಘಾಟನೆಗೆ ಪಾಲ್ಗೊಳ್ಳುವ ಕುರಿತು ಸರ್ವ ಸದಸ್ಯರ ಅಭಿಪ್ರಾಯ ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದ ಪದಾಧಿಕಾರಿಗಳು, ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತ, ಕಳೆದ ಮೂರು ವರ್ಷದಿಂದ ಶಹಾಬಾದ್ ನಗರ ರೈಲು ನಿಲ್ದಾಣದಲ್ಲಿ ಕರೋನಾ ಲಾಕ್‍ಡೌನ್‍ಗಿಂತ ಮುಂಚೆ ನಿಲ್ಲುತ್ತಿದ್ದ ರೈಲುಗಳನ್ನು ನಿಲ್ಲಿಸಲು ಆಗ್ರಹಿಸಿ ಹೋರಾಟ ಸಮಿತಿ ಹಲವಾರು ಹೋರಾಟಗಳನ್ನು ಮಾಡುತ್ತ ಬಂದಿದ್ದು, ಆದರೆ, ರೈಲ್ವೆ ಇಲಾಖೆ ಈ ಕುರಿತು ಯಾವುದೇ ಕ್ರಮ ಕೈಗೊಳ್ಳಲು ವಿಫಲವಾಗುತ್ತಿದೆ. ಈ ಕುರಿತು ಸಂಸದ ಡಾ. ಉಮೇಶ ಜಾಧವ ಅವರು ಹೆಚ್ಚಿನ ಪ್ರಯತ್ನ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು. ಮಾನ್ಯ ಸಂಸದರು ಭಾನುವಾರಕ್ಕೆ ಮುಂಚೆ ನಗರಕ್ಕೆ ಆಗಮಿಸಿ, ಇಲ್ಲಿಯ ಜನರ ಸಮಸ್ಯೆ ಅಲಿಸಬೇಕೆಂದು ಒತ್ತಾಯಿಸಲಾಯಿತು.
ನಾಲ್ಕು ವರ್ಷ ಸುಮ್ಮನಿದ್ದ ಸಂಸದರು ಚುನಾವಣೆ ಸಂದರ್ಭದಲ್ಲಿ ನವೀಕರಣಗೊಳಿಸುವ ಯೋಜನೆ ಹಾಕಿಕೊಂಡಿದ್ದು. ಕೇವಲ ನಿಲ್ದಾಣ ನವೀಕರಣಗೊಂಡರೆ ಮಾತ್ರ ಸಾಲದು, ನಿಲ್ದಾಣಕ್ಕೆ ತಕ್ಕಂತೆ ರೈಲುಗಳು ನಿಲ್ಲಬೇಕು ಎಂದು ಅಭಿಪ್ರಾಯ ಪಡಲಾಯಿತು.
ಸಭೆಯಲ್ಲಿ ಉಪಸ್ಥಿತರಿದ್ದು ರೈಲ್ವೆ ಪೊಲೀಸ್ ಅಧಿಕಾರಿ ಗಜಾನನ ಕಾಕರವಾಲ ಹಾಗೂ ರೈಲ್ವೆ ಬೇಹುಗಾರಿಕೆ ವಿಭಾಗದ ಅವಿನಾಶ ಪಾಟೀಲ ಅವರಿಗೆ ವಿವರಣೆ ನೀಡಿದ ಸದಸ್ಯರು, ಕರೋನಾ ಲಾಕ್‍ಡೌನಗಿಂತ ಮುಂಚೆ ನಿಲ್ಲುತ್ತಿದ್ದ ಎಲ್ಲಾ ರೈಲು ನಿಲ್ಲಿಸಬೇಕು ಹಾಗೂ ರೈಲ್ವೆ ನಿಲ್ದಾಣದ ಆಚೆ ಸುಮಾರು 10 ಸಾವಿರ ಜನರು ವಾಸ ಮಾಡುತ್ತಿರುವದರಿಂದ ಕೆಳ ಸೇತುವೆ ನಿರ್ಮಿಸಬೇಕೆಂದು ಆಗ್ರಹಿಸಿದರು. ಅಧಿಕಾರಿ ಗಜಾನನ ಅವರು ಮಾತನಾಡಿ, ನಿಮ್ಮ ಬೇಡಿಕೆಗಳು ಸಮಂಜಸವಾಗಿದ್ದು, ಅವುಗಳನ್ನು ಲಿಖಿತವಾಗಿ ನೀಡಿದ್ದಲ್ಲಿ ಕೂಡಲೇ ರೈಲ್ವೆ ಇಲಾಖೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವದಾಗಿ ಹೇಳಿದರು.
ಈ ಕುರಿತು ಮನವಿ ಪತ್ರ ಸಲ್ಲಿಸುವದು, ಹಾಗೂ ಇನ್ನೂ ಮೂರು ದಿನದಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ಕೈಗೊಳ್ಳುವ ಕ್ರಮದ ಅಧಾರದ ಮೇಲೆ ಸಮಾರಂಭಕ್ಕೆ ಹಾಜರಾಗುವ, ಭಹಿಷ್ಕರಿಸುವ ನಿರ್ಧಾರ ಕೈಗೊಳ್ಳಲು ನಿರ್ಧರಿಸಲಾಯಿತು.
ರಸ್ತೆಗಾಗಿ ರಸ್ತೆ ತಡೆ.
ಶಹಾಬಾದ್ ನಗರದ ರಾಷ್ಟ್ರೀಯ ಹೆದ್ದಾರಿ 150ರ ವಾಡಿ ಕ್ರಾಸ್‍ದಿಂದ ನಗರದಕ್ಕೆ ಬರುವ ರಾಜ್ಯ ಹೆದ್ದಾರಿ 125 ರಲ್ಲಿ ವಾಡಿ ಕ್ರಾಸ್‍ನಿಂದ ಮರಗೋಳ ಕಾಲೇಜ, ಜೇವರ್ಗಿ ರಸ್ತೆಯವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದುದರಿಂದ ಹಾಗೂ ಎಲ್ಲಾ ತಾಲೂಕ ಕಚೇರಿ ಪ್ರಾರಂಭಿಸಲು ಆಗ್ರಹಿಸಿ ಅ. 12 ಶನಿವಾರರಂದು ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಪ್ರತಿಭಟಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಹೋರಾಟ ಸಮಿತಿಯ ಕೃಷ್ಣಪ್ಪ ಕರಣಿಕ, ರಾಜೇಶ ಯನಗುಂಟಿಕರ್, ಕಿರಣ ಚವ್ಹಾಣ, ರಾಜ ಮಹ್ಮದ ರಾಜ, ಬಾಬುರಾವ ಪಂಚಾಳ, ಲೋಹಿತ ಕಟ್ಟಿ, ಡಾ.ಅಹ್ಮದ ಪಟೇಲ, ಬಸವರಾಜ ಸಾತಿಹಾಳ ಅನೀಲ ಹೀಬಾರೆ, ಶರಣು ಪಗಲಾಪುರ, ಸುರೇಶ ಕುಂಬಾರ, ವಾಸುದೇವ ಚವ್ಹಾಣ, ಮಹ್ಮದ ಅಜರ್, ಮಹ್ಮದ ಇಮ್ರಾನ್, ಸದಾನಂದ ಕುಂಬಾರ ಇತರರು ಇದ್ದರು. ಹೋರಾಟ ಸಮಿತಿ ಮಹಾ ಪ್ರಧಾನ ಕಾರ್ಯದರ್ಶಿ ಕೆ.ರಮೇಶ ಭಟ್ಟ ನಿರೂಪಿಸಿದರು.
ನವದೆಹಲಿಯಲ್ಲಿದ್ದ ಸಂಸದ ಡಾ.ಉಮೇಶ ಜಾಧವ ಅವರೊಂದಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ಮಾತನಾಡಿದಾಗ, ಈಗಾಗಲೇ ಮೂರು ರೈಲುಗಳು ನಿಲ್ಲುತ್ತಿವೆ, ಈ ಕುರಿತು ಸಂಸದನಲ್ಲಿ ಎರಡು ಬಾರಿ ವಿಷಯ ಪ್ರಸ್ತಾವನೆ ಮಾಡಲಾಗಿದೆ, ಕಳೆದ ಜುಲೈ 14 ರಂದು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಅಮೃತ ಭಾರತ ಯೋಜನೆಯಲ್ಲಿ 26.76 ಕೋ. ರೂ. ರೈಲು ನಿಲ್ದಾಣ ನವೀಕರಣ ಮಾಡಲಾಗುತ್ತಿದೆ ಇನ್ನುಳಿದ ರೈಲು ನಿಲುಗಡೆಗೆ, ಹೋರಾಟ ಸಮಿತಿ ಗೌರವ ಅಧ್ಯಕ್ಷ ಶಿವರಾಜ ಇಂಗಿನಶೆಟ್ಟಿ ಅವರೊಂದಿಗೆ ಸಂಜೆ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿರುವದಾಗಿ ಮಾಹಿತಿ ನೀಡಿದರು.