ರೈಲು ನಿಲ್ದಾಣದಲ್ಲಿ ಮಾಸ್ಕ್ ಧರಿಸದವರಿಗೆ 500 ರೂ. ದಂಡ

ನವದೆಹಲಿ, ಏ.17- ದೇಶದಲ್ಲಿ ಕೊರೋನಾ ಸೋಂಕು ಸಂಘ ದಿನನಿತ್ಯ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈಲು ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಸಂಚರಿಸುವ ಸಮಯದಲ್ಲಿ ಮಾಸ್ಕ್‌ ಧರಿಸದಿದ್ದರೆ 500‌ರೂಪಾಯಿ ದಂಡ‌‌ವಿಧಿಸಲು ಭಾರತೀಯ ರೈಲ್ವೆ ಮುಂದಾಗಿದೆ.

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ರೈಲುಗಳಲ್ಲಿ ಪ್ರಯಾಣಿಸುವಾಗ ಮತ್ತು ರೈಲ್ವೆ ನಿಲ್ದಾಣದ ಆವರಣದಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಇಲ್ಲದಿದ್ದರೆ ಕ್ರಮ ಅನಿವಾರ್ಯ ಎನ್ನುವ ಎಚ್ಚರಿಕೆಯನ್ನೂ ನೀಡಲಾಗಿದೆ

ಮಾಸ್ಕ್ ಧರಿಸುವ ಆದೇಶವನ್ನ ಮುಂದಿನ ಆದೇಶದವರೆಗೆ ಜಾರಿಗೆ ತರಲು ನಿರ್ಧರಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತೀಚೆಗೆ ಹೊರಡಿಸಿರುವ ಕೋವಿಡ್-19 ಮಾರ್ಗಸೂಚಿ ಮತ್ತು ಶಿಷ್ಟಾಚಾರಗಳನ್ನ ಪಾಲಿಸುವಂತೆ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ

ಪ್ರಸ್ತುತ ದೇಶದಲ್ಲಿ ಸುಮಾರು 1402 ವಿಶೇಷ ರೈಲುಗಳ ಸಂಚಾರ ಮಾಡುತ್ತಿದ್ದು, ಈ ಪೈಕಿ ಒಟ್ಟು 5 ಸಾವಿರದ 381 ಉಪ ನಗರ ರೈಲು ಸೇವೆಗಳು ಮತ್ತು 830 ಪ್ರಯಾಣಿಕ ರೈಲುಗಳು ಸಂಚರಿಸುತ್ತಿವೆ

ಅಗತ್ಯ ಕ್ರಮ

ಈ ನಡುವೆ ಹುಬ್ಬಳ್ಳಿಯ ರೈಲ್ವೆ ಭಾಗದ ವಿಭಾಗೀಯ ಪ್ರಧಾನ ವ್ಯವಸ್ಥಾಪಕರು ಟ್ವೀಟ್ ಮಾಡಿ ರೈಲು ನಿಲ್ದಾಣಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ

ಭಾರತೀಯ ರೈಲ್ವೈಯು ಕೋವಿಡ್-19 ಮಹಾಮಾರಿಯು ಹರಡದಂತೆ ತಡೆಯಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.ಈ ನಿಟ್ಟಿನಲ್ಲಿ ಪ್ರಯಾಣದ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಅದು ಸೂಚಿಸಿರುವ ಮಾರ್ಗಸೂಚಿಗಳಲ್ಲೊಂದು ಎಂದಿದ್ದಾರೆ

ರೈಲುಗಳೂ ಸೇರಿದಂತೆ ರೈಲ್ವೆ ಆವರಣದಲ್ಲಿ ಮಾಸ್ಕ್ ಧರಿಸದಿರುವ ವ್ಯಕ್ತಿಗಳಿಗೆ ರೂ.500 ರವರೆಗೆ ದಂಡ ವಿಧಿಸಲಾಗುವುದು ಎಂದು‌ ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ