ರೈಲು ನಿಲ್ದಾಣದಲ್ಲಿನ ಬಾಲ ಹನುಮಾನ್ ಮಂದಿರದ ತೆರವು ವಿರೋಧಿಸಿ ಬೃಹತ್ ಪ್ರತಿಭಟನೆ

ಕಲಬುರಗಿ,ಮಾ.15: ನಗರದ ರೈಲು ನಿಲ್ದಾಣದಲ್ಲಿರುವ ಸುಮಾರು 40 ವರ್ಷಗಳ ಹಳೆಯ ಬಾಲ ಹನುಮಾನ್ ಮಂದಿರವನ್ನು ತೆರವುಗೊಳಿಸಲು ಈಗಾಗಲೇ ರೈಲ್ವೆ ಇಲಾಖೆಯ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು ಖಂಡನಾರ್ಹ. ಕೂಡಲೇ ಆ ನೋಟಿಸ್ ರದ್ದುಪಡಿಸಿ ದೇವಸ್ಥಾನವನ್ನು ಜೀರ್ಣೋದ್ದಾರಗೊಳಿಸಬೇಕು. ಇಲ್ಲದೇ ಹೋದಲ್ಲಿ ಮಾರ್ಚ್ 17ರಂದು ರೈಲು ನಿಲ್ದಾಣದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹಿಂದೂ ಜಾಗೃತಿ ಸೇನೆ ಜಿಲ್ಲಾ ಅಧ್ಯಕ್ಷ ಲಕ್ಷ್ಮೀಕಾಂತ್ ಸ್ವಾದಿ ಅವರು ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಾತನ ದೇವಸ್ಥಾನವು ಸುಮಾರು ವರ್ಷಗಳಿಂದ ಸಾರ್ವಜನಿಕರು ಪೂಜೆ ಮಾಡಿಕೊಂಡು ಬಂದಿದ್ದಾರೆ. ರೈಲ್ವೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ದೇವಾಲಯ ನಶಿಸಿ ಹೋಗುತ್ತಿದೆ. ದೇವಸ್ಥಾನದ ಅರ್ಧ ಭಾಗ ಭಾಗಿ ಭೂಮಿ ಒಳಗೆ ಹೋಗಿದೆ. ದೇವಸ್ಥಾನಕ್ಕೆ ಒಂದು ವಿದ್ಯುದ್ ದ್ವೀಪ ಸಹ ಇಲ್ಲ. ಸ್ಥಳೀಯರು ಈ ಕುರಿತು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈಲ್ವೆ ನಿಲ್ದಾಣದ ಸೌಂದರೀಕರಣಕ್ಕಾಗಿ ರೈಲ್ವೆ ಇಲಾಖೆಯು ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಆದಾಗ್ಯೂ, ಆವರಣದಲ್ಲಿರುವ ದೇವಸ್ಥಾನ ಇಲಾಖೆಯವರ ಕಣ್ಣಿಗೆ ಕಾಣಿಸುತ್ತಿಲ್ಲ. ದೇವಸ್ಥಾನದ ಒಳಗಡೆ ಹಂದಿ, ನಾಯಿಗಳು ಹೋಗಿ ವಾಸಿಸುತ್ತಿದ್ದು, ಹಂದಿಗಳ ತಾಣವಾಗಿ ಪರಿಣಮಿಸಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಹಿಂದೂಗಳು ಪೂಜಿಸುವ ಆಂಜನೇಯ ದೇವಸ್ಥಾನದ ಗತಿ ನೋಡಿದರೆ ದು:ಖವಾಗುತ್ತದೆ. ದೇವಸ್ಥಾನ ಇರುವುದು ಪಾಕಿಸ್ತಾನ್‍ದಲ್ಲಿ ಅಲ್ಲ. ರಾಮ ಹುಟ್ಟಿದ ಭಾರತದಲ್ಲಿ, ಅದರಲ್ಲಿಯೂ ಶರಣರ ನಾಡು ಕಲಬುರ್ಗಿಯಲ್ಲಿ. ಇಂತಹ ದೇವಸ್ಥಾನಕ್ಕೆ ದುರ್ಗತಿ ಬಂದಿರುವುದಕ್ಕೆ ರೈಲ್ವೆ ಇಲಾಖೆಯ ಅಧಿಕಾರಿಗಳೇ ನೇರ ಹೊಣೆಯಾಗಿದ್ದಾರೆ ಎಂದು ಅವರು ದೂಷಿಸಿದರು.
ದೇವಸ್ಥಾನದ ದುಸ್ಥಿತಿಯನ್ನು ಕಂಡು ಅಲ್ಲಿಯ ಸ್ಥಳೀಯರು ತಮ್ಮ ಸ್ವಂತ ಹಣದಿಂದ ದೇವಾಲಯದ ನೂತನ ಕಟ್ಟಡವನ್ನು ನಿರ್ಮಣ ಮಾಡಿದ್ದು, ಶೇಕಡಾ 75ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮೇಲ್ಛಾವಣೆ ಹಾಕುವ ಸಮಯದಲ್ಲಿ ಅಲ್ಲಿಯ ರೈಲ್ವೆ ಅಧಿಕಾರಿಗಳು ಕಾಮಗಾರಿಯನ್ನು ತಡೆಹಿಡಿದಿದ್ದಾರೆ. ಸುಮಾರು ಎರಡು ತಿಂಗಳಿಂದ ಕೆಲಸ ನಡೆಯುತ್ತಿದ್ದು ಯಾರೂ ಕೂಡ ಕೇಳಿರಲಿಲ್ಲ. ಆದಾಗ್ಯೂ, ಒಬ್ಬ ರೈಲ್ವೆ ಅಧಿಕಾರಿ ಸಂತೋಷ್ ಎಂಬುವವರು ಕಟ್ಟಡ ನಿರ್ಮಾಣಕ್ಕೂ ಬಿಡದೇ, ತಾವು ಕಟ್ಟಿಸದೇ ಸಾರ್ವಜನಿಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ನಂತರ ಪ್ರತಿಭಟನೆ ಮಾಡಿದಾಗ ಅಧಿಕಾರಿಗಳು ಮನವಿಗೆ ಸ್ಪಂದಿಸಿದರು. ಅಲ್ಲದೇ ಡಿಆರ್‍ಎಂ ಅವರಿಗೆ ಕೊಡಿ, ಮುಂದಿನ ಕಾಮಗಾರಿ ನಾವು ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಅದೇ ರೀತಿ ಸೊಲ್ಲಾಪುರ ಡಿಆರ್‍ಎಂ ಅವರಿಗೆ ಎರಡು ಬಾರಿ ಮನವಿ ಸಲ್ಲಿಸಿದ್ದು, ದೇವಸ್ಥಾನವನ್ನು ಒಡೆಯದೇ ಅಪೂರ್ಣ ಕಾಮಗಾರಿ ಪೂರ್ತಿ ಮಾಡಿ ಎಂದು ಕೋರಿದಾಗ ಅವರೂ ಸಹ ಒಪ್ಪಿದ್ದರು ಎಂದು ಅವರು ಹೇಳಿದರು.
ಕಳೆದ 6ರಂದು ಡಿಆರ್‍ಎಂ ಅವರು ನಗರಕ್ಕೆ ಆಗಮಿಸಿದ್ದರು. ಸಂಘಟನೆ ಪದಾಧಿಕಾರಿಗಳು, ಅಲ್ಲಿಯ ಸಾರ್ವಜನಿಕರು, ಮಹಿಳೆಯರು ದೇವಸ್ಥಾನದ ಹತ್ತಿರ ಹೋಗಿ ಅಲ್ಲಿಯೂ ಡಿಆರ್‍ಎಂ ಅವರಿಗೆ ಯಾವುದೇ ಕಾರಣಕ್ಕೂ ದೇವಸ್ಥಾನ ಧ್ವಂಸಗೊಳಿಸದೇ ಅದನ್ನು ಪುನರ್ ನಿರ್ಮಾಣ ಮಾಡಿ ಒಳಗಡೆ ಹಂದಿ, ನಾಯಿಗಳು ಹೋಗಲಾರದಂತಹ ರೀತಿಯಲ್ಲಿ ಕಂಪೌಂಡ್ ನಿರ್ಮಾಣ ಮಾಡಲು ಮನವಿ ಮಾಡಿದ್ದೇವೆ. ಆಗ ಸಂಸದ ಡಾ. ಉಮೇಶ್ ಜಾಧವ್ ಮತ್ತು ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು ಸಹ ಬೇಡಿಕೆಗಳಿಗೆ ಸ್ಪಂದಿಸಲು ಹೇಳಿದ್ದಾರೆ. ಆಗ ಅಧಿಕಾರಿಗಳು ಒಪ್ಪಿದ್ದು, ಈಗ ದೇವಸ್ಥಾನಕ್ಕೆ ನೋಟಿಸ್ ಅಂಟಿಸಿದ್ದು, ಮಾರ್ಚ್ 17ರಂದು ದೇವಸ್ಥಾನವನ್ನು ತೆರವುಗೊಳಿಸುವುದಾಗಿ ತಿಳಿಸಿದ್ದಾರೆ. ಅದನ್ನು ವಿರೋಧಿಸಿ ಅಂದೇ ಮಾರ್ಚ್ 17ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಏನಾದರೂ ಹೆಚ್ಚು ಕಡಿಮೆ ಆದಲ್ಲಿ ಅದಕ್ಕೆ ರೈಲ್ವೆ ಇಲಾಖೆಯೇ ನೇರ ಹೊಣೆಯಾಗಲಿದೆ ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸಚಿನ್ ಫರತಾಬಾದ್, ಹಿಂದೂ ಪರ ಹೋರಾಟಗಾರರಾದ ಬಾಬುರಾವ್ ರಾಠೋಡ್, ತಿಪ್ಪಣ್ಣ ಒಡೆಯರಾಜ್, ಸಂತೋಷ್ ಗುತ್ತೇದಾರ್, ದಶರಥ್ ಇಂಗೋಳೆ ಮುಂತಾದವರು ಉಪಸ್ಥಿತರಿದ್ದರು.