ಬಾಲಸೋರ್,ಜೂ.೬:ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಆರಂಭಿಸಿದೆ. ಈ ದುರ್ಘಟನೆಯ ಹಿಂದೆ ವಿಧ್ವಂಸಕ ಕೃತ್ಯದ ಕೈವಾಡವಿರುವ ಶಂಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿತು.ಸಿಬಿಐ ೧೦ ಮಂದಿ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ನಿರತವಾಗಿದೆ.ಘಟನೆಗೆ ಸಂಬಂಧಿಸಿದಂತೆ ಈ ಮೊದಲು ರೈಲ್ವೆ ಸಚಿವ ವೈಷ್ಣವ್ ವೈಭವ್ ಉನ್ನತ ಮಟ್ಟದ ಸಮಿತಿ ರಚಿಸಿ ತನಿಖೆಗೆ ಆದೇಶಿಸಿದ್ದರು. ಈ ಸಮಿತಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.ಜೂ.೪ ರಂದು ಸಂಭವಿಸಿದ ರೈಲು ದುರಂತದಲ್ಲಿ ೨೭೫ ಜನರು ಸಾವನ್ನಪ್ಪಿ, ೯೦೦ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದಕ್ಕೂ ಮುನ್ನ ಘಟನಾ ಸ್ಥಳಕ್ಕೆ ರೈಲ್ವೆ ಸುರಕ್ಷತಾ ಆಯುಕ್ತ ಸುರೇಶ್‌ಕುಮಾರ್ ಪಾಟಕ್ ಬಹನಾಗ ಬಜಾರ್ ರೈಲ್ವೆ ನಿಲ್ದಾಣದ ನಿಯಂತ್ರಣಾ ಕೊಠಡಿ, ಸಿಗ್ನಲ್ ಕೊಠಡಿಗಳಿಗೆ ತೆರಳಿ ಪರಿಶೀಲನೆ ನಡೆಸಿದರು.ಮತ್ತೊಂದೆಡೆ ಘಟನೆ ನಡೆದ ನಂತರ ೧೦೧ ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಇದುವರೆಗೂ ೮೫ ಮೃತದೇಹಗಳ ಗುರುತು ಪತ್ತೆ ಹಚ್ಚಲಾಗಿದೆ. ೫೫ ಮೃತದೇಹಗಳನ್ನು ಸಂಬಂಧಪಟ್ಟವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಪೂರ್ವ ಕೇಂದ್ರೀಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಿಂಕೇಶ್‌ರಾಯ್ ಈಗ ೨೦೦ ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಒಡಿಶಾ ರೈಲು ದುರಂತದಲ್ಲಿ ರೈಲ್ವೆ ಹಳಿಗಳ ಮೇಲೆ ನೂರಾರು ಶವಗಳ ರಾಶಿ ರಾಶಿ, ಪರಿಹಾರ ಕಾರ್ಯಾಚರಣೆಯ ಬಳಿಕ ಎಲ್ಲ ಮೃತದೇಹಗಳನ್ನು ತಾತ್ಕಾಲಿಕವಾಗಿ ಶಾಲೆಯಲ್ಲು ನಿರ್ಮಿಸಲಾಗಿರುವ ಶವಾಗಾರಕ್ಕೆ ಸಾಗಿಸಲಾಗಿದೆ.
ಹೆಣಗಳ ಮಧ್ಯೆ ಸಂಬಂಧಿಕರು ತಮ್ಮವರ ಶವಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಘಟನೆ ಸಂಭವಿಸಿ ಹಲವು ಗಂಟೆಗಳು ಕಳೆದುಹೋಗಿದ್ದವು. ಘಟನೆಯಲ್ಲಿ ತಮ್ಮವರು ಬದುಕಿರುವುದು ಹಾಗಿರಲಿ, ಗುರುತು ಸಿಕ್ಕಿದರೆ ಸಾಕು ಎನ್ನುವ ಸಂದರ್ಭದಲ್ಲಿ ತಂದೆಯೊಬ್ಬರು ಶವಗಳ ಮಧ್ಯೆ ತಮ್ಮ ಮಗನನ್ನು ಜೀವಂತವಾಗಿ ಹೊರ ತೆಗೆದಿದ್ದಾರೆ.
ದುರಂತ ಸಂಭವಿಸಿದ ನಂತರ ಶಾಲೆಯೊಂದನ್ನೇ ತಾತ್ಕಾಲಿಕ ಶವಾಗಾರವನ್ನಾಗಿ ನಿರ್ಮಿಸಿದ್ದು, ಬಿಸ್ವಜಿತ್ ಮಲ್ಲಿಕ್ ಅವರ ತಂದೆ ತಕ್ಷಣವೇ ಆಂಬುಲೆನ್ಸ್‌ನಲ್ಲಿ ೨೩೦ ಕಿ.ಮೀ ದೂರದಲ್ಲಿರುವ ಮಗನನ್ನು ಹುಡುಕಲು ಬಂದಿದ್ದರು. ರಾಶಿ ರಾಶಿ ಶವಗಳ ಮಧ್ಯೆ ತಮ್ಮ ಮಗನನ್ನು ಶವಾಗಾರದಿಂದ ಹೊರ ತೆಗೆದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಆರೋಗ್ಯ ಸ್ಥಿರವಾಗಿದೆ, ಹೌರಾದಲ್ಲಿ ಹೆಲ್ಲರಾಮ್ ಅಂಗಡಿ ನಡೆಸುತ್ತಿದ್ದಾರೆ. ತಮ್ಮ ಮಗ ಬಿಸ್ವಜಿತ್‌ನನ್ನು ಶಾಲಿಮಾರ್ ರೈಲ್ವೆ ನಿಲ್ದಾಣದಲ್ಲಿ ಡ್ರಾಪ್ ಮಾಡಿದ್ದರು. ಅಪಘಾತ ಸಂಭವಿಸಿದ ನಂತರ ಬಿಸ್ವಜಿತ್‌ನೊಂದಿಗೆ ಮಾತನಾಡುತ್ತಿದ್ದರು. ನೋವಿನಿಂದ ನರಳುತ್ತಿದ್ದರು ಎಂದು ಹೇಳಲಾಗಿತ್ತು. ವರದಿಗಳ ಪ್ರಕಾರ ಕೊಲ್ಕತ್ತ ತಲುಪುವವರೆಗೂ ಪ್ರಜ್ಞೆ ಬಂದಿರಲಿಲ್ಲ ಎಂದು ಹೇಳಲಾಗಿದೆ.