ರೈಲು ದುರಂತ: ಭುವನೇಶ್ವರದಲ್ಲಿ ಸಚಿವ ಲಾಡ್ ಸಭೆ

ಭುವನೇಶ್ವರ, ಜೂ. 5: ಕರ್ನಾಟಕದ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು, ಒಡಿಶಾದ ಬಹನಾಗ್ ನಲ್ಲಿ ನಡೆದ ಭೀಕರ ರೈಲು ದುರಂತಕ್ಕೆ ಸಂಬಂಧಿಸಿದಂತೆ, ಭುವನೇಶ್ವರದ ರಾಜೀವ್ ಭವನದಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳ ಅಯುಕ್ತರು, ಮುಖ್ಯ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳು, ಎನ್ ಡಿಆರ್ ಎಫ್ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು.

ದುರಂತದಲ್ಲಿ ಕರ್ನಾಟಕದ ಪ್ರಯಾಣಿಕರು ಸಿಲುಕಿ ತೊಂದರೆಗೊಳಗಾಗಿರುವ ಬಗ್ಗೆಯೂ ಈ ಸಂದರ್ಭದಲ್ಲಿ ಮಾಹಿತಿ ಪಡೆದರು.

ಸಂತೋಷ್ ಲಾಡ್ ಅವರು, ದುರಂತ ನಡೆದ ಸ್ಥಳಕ್ಕೆ ತೆರಳಿದ್ದು, ಕರ್ನಾಟಕದ ಪ್ರಯಾಣಿಕರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಲಾಡ್ ಅವರೊಂದಿಗೆ ರಾಜ್ಯದ ಅಧಿಕಾರಿಗಳು ತೆರಳಿದ್ದಾರೆ. ಲಾಡ್ ಅವರು ಆಸ್ಪತ್ರೆ, ಶವಾಗಾರಗಳಿಗೆ ಭೇಟಿ ನೀಡಿ ರಾಜ್ಯದ ಪ್ರಯಾಣಿಕರ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ರೈಲುಗಳಲ್ಲಿ ಪ್ರಯಾಣಿಸುತ್ತಿದ್ದ ಬಹುತೇಕ ಕನ್ನಡಿಗರು ಸುರಕ್ಷಿತವಾಗಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.