ಬಾಲಸೋರ್,ಜೂ.೪:ಒಡಿಶಾದ ಬಾಲಸೋರ್‌ನಲ್ಲಿ ನಡೆದ ರೈಲು ಅಪಘಾತಕ್ಕೆ ತಾಂತ್ರಿಕ ದೋಷ ಕಾರಣ ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ವ್ಯವಸ್ಥೆಯ ಅಸಮರ್ಪಕ ಕಾರ್ಯನಿರ್ವಹಣೆಯಿಂದ ರೈಲು ದುರಂತ ಸಂಭವಿಸಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ರೈಲು ಅಪಘಾತದ ಪತ್ತೆಯ ತನಿಖೆ ಪೂರ್ಣಗೊಂಡಿದ್ದು, ರೈಲು ಅಪಘಾತಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಲಾಗಿದೆ. ವಿವರಗಳಿಗೆ ನಾನು ಹೋಗಲ್ಲ, ಆದರೆ, ಮೂಲ ಕಾರಣ ಮತ್ತು ಹೊಣೆಗಾರರನ್ನು ಗುರುತಿಸಲಾಗಿದೆ ಎಂದರು.
ದುರಂತದ ಮೂಲ ಕಾರಣ ಪಾಯಿಂಟ್‌ಯಂತ್ರ ಮತ್ತು ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್‌ಗೆ ಸಂಬಂಧಿಸಿದೆ ಎಂದು ದೃಢಪಡಿಸಿದರು.
ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆ ರೈಲುಗಳ ನಡುವಿನ ಸಂಘರ್ಷವನ್ನು ತಡೆಯಲು ವಿನ್ಯಾಸಗೊಳಿಸಲಾಗಿದ್ದ ಸುರಕ್ಷತಾ ಕ್ರಮ, ಸಮರ್ಪಕವಾಗಿ ಕೆಲಸ ಮಾಡದ ಕಾರಣ ಈ ಘೋರ ದುರಂತ ಸಂಭವಿಸಿದೆ ಎಂದರು.
ಈ ದುರಂತಕ್ಕೆ ಯಾರು ಹೊಣೆ, ಯಾವ ರೀತಿ ಈ ದುರಂತ ನಡೆದಿದೆ ಎಂಬ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿ ಎಲ್ಲ ಕಾರಣಗಳನ್ನೂ ಪತ್ತೆ ಹಚ್ಚುತ್ತೇವೆ ಎಂದು ಅವರು ಹೇಳಿದರು.
ಈ ಅಪಘಾತಕ್ಕೂ ಘರ್ಷಣೆ ನಿರೋಧ ವ್ಯವಸ್ಥೆ ಕವಚಕ್ಕೂ ಸಂಬಂಧ ಇಲ್ಲ. ಕವಚ್ ಸಾಧನದಿಂದ ಈ ಅಪಘಾತವನ್ನು ತಡೆಯಬಹುದಿತ್ತು ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಕೆಯನ್ನು ತಳ್ಳಿ ಹಾಕಿದ ಅವರು,ತಾಂತ್ರಿಕ ದೋಷ ಈ ಅಪಘಾತಕ್ಕೆ ಕಾರಣ ಎಂದು ಪುನರುಚ್ಛರಿಸಿದರು.
ಹಳಿ ಪುನರ್‌ಸ್ಥಾಪನೆ ಬಿರುಸು
ಮೂರು ರೈಲುಗಳ ಡಿಕ್ಕಿ ಸಂಭವಿಸಿದ ದುರಂತ ಸ್ಥಳದಲ್ಲಿ ರೈಲ್ವೆ ಹಳಿಗಳನ್ನು ಪುನರ್‌ಸ್ಥಾಪಿಸುವ ಕಾರ್ಯ ಬಿರುಸಿನಿಂದ ನಡೆದಿದೆ. ಇಂದು ರೈಲ್ವೆ ಹಳಿಗಳ ಪುನರ್ ಸ್ಥಾಪನೆಯ ಕಾರ್ಯವನ್ನು ಪರಿಶೀಲಿಸಿದ್ದೇನೆ. ಆದಷ್ಟು ಬೇಗ ರೈಲ್ವೆ ಹಳಿಗಳ ಪುನರ್‌ಸ್ಥಾಪನೆ ಕಾರ್ಯ ಸಂಪೂರ್ಣವಾಗಲಿದೆ ಎಂದು ರೈಲ್ವೆ ಸಚಿವರು ಹೇಳಿದರು.
ಇನ್ನು ೨-೩ ದಿನಗಳಲ್ಲಿ ಅಂದರೆ ಬುಧವಾರದ ಹೊತ್ತಿಗೆರೈಲ್ವೆ ಹಳಿಗಳನ್ನು ಪುನರ್ ಸ್ಥಾಪಿಸುವ ಕಾರ್ಯ ಸಂಪೂರ್ಣವಾಗುವ ವಿಶ್ವಾಸವಿದೆ. ಪುನರ್‌ಸ್ಥಾಪನಾ ಕಾರ್ಯ ಅತ್ಯಂತ ವೇಗದಿಂದ ನಡೆದಿದೆ ಎಂದು ಅವರು ಹೇಳಿ, ಬುಧವಾರದಿಂದ ಹೊಸ ಹಳಿಗಳ ಮೇಲೆ ರೈಲುಗಳು ಯಥಾಪ್ರಕಾರ ಸಂಚರಿಸಲಿವೆ ಎಂದರು.
ಸರಕು ಸಾಗಾಣೆ ರೈಲಿನ ಎರಡೂ ಬೋಗಿಗಳೂ ಸೇರಿದಂತೆ ಪ್ರಯಾಣಿಕ ರೈಲುಗಳ ಮೊಗಚಿ ಬಿದ್ದ ಬೋಗಿಗಳನ್ನೂ ಹೊರ ತೆಗೆಯಲಾಗಿದ್ದು, ಒಂದು ಕಡೆಯಿಂದ ರೈಲ್ವೆ ಹಳಿಗೆ ಸಂಪರ್ಕ ಕಲ್ಪಿಸುವ ಕೆಲಸ ನಡೆಯುತ್ತಿದೆ. ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಲಾಗುವುದು ಎಂದು ಆಗ್ನೇಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಆದಿತ್ಯಕುಮಾರ್ ಹೇಳಿದ್ದಾರೆ.
ಹಳಿಗಳ ಪುನರ್‌ಸ್ಥಾಪನಾ ಕಾರ್ಯ ಸಮರೋಪಾದಿಯಲ್ಲಿ ನಡೆದಿದ್ದು, ಸಾವಿರಕ್ಕೂ ಹೆಚ್ಚು ಕಾರ್ಮಿಕರು, ತಂತ್ರಜ್ಞರು ಹಳಿಗಳ ಪುನರ್‌ಸ್ಥಾಪನಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಹಾಗೆಯೇ, ಭಾರಿ ಯಂತ್ರಗಳನ್ನು ಬಳಸಿ ಹಳಿಗಳನ್ನು ದುರಸ್ಥಿ ಮಾಡುವ ಕಾರ್ಯವೂ ನಡೆದಿದೆ. ಎಲ್ಲರೂ ವಿಶ್ರಾಂತಿ ಇಲ್ಲದೆ ಹಳಿಗಳ ಸರಿಪಡಿಸುವಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ರೈಲ್ವೆ ಮಂತ್ರಾಲಯ ಟ್ವೀಟ್‌ನಲ್ಲಿ ತಿಳಿಸಿದೆ.
೨೮೮ ಸಾವು, ೧೦೦೦ಕ್ಕೂ ಹೆಚ್ಚು ಗಾಯ, ಕೇಂದ್ರ ಆರೋಗ್ಯ ಸಚಿವರ ಭೇಟಿ
ರೈಲ್ವೆ ದುರಂತದಲ್ಲಿ ೨೮೮ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಗಾಯಗೊಂಡಿರುವವರನ್ನು ಬಾಲಸೋರ್‌ನ ಸರ್ಕಾರಿ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಕೇಂದ್ರ ರೈಲ್ವೆ ಸಚಿವರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ನಿನ್ನೆ ಪ್ರಧಾನಿ ನರೇಂದ್ರಮೋದಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಇಂದು ಕೇಂದ್ರ ಆರೋಗ್ಯ ಸಚಿವ ಮನ್ಸೂರ್‌ಮಾಂಡವಿಯಾ ಅವರು ಒಡಿಶಾಗೆ ಬಂದಿದ್ದು, ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ದುರಂತದಲ್ಲಿ ಗಾಯಗೊಂಡಿರುವವರಿಗೆ ನೀಡುತ್ತಿರುವ ಚಿಕಿತ್ಸೆ ವೈದ್ಯಕೀಯ ವ್ಯವಸ್ಥೆಗಳು ಸಮರ್ಪಕವಾಗಿದೆಯೇ ಎಂಬುದನ್ನು ಪರಿಶೀಲಿಸಿದರು.