ರೈಲು ಅವಘಡ;ಮಾಹಿತಿ ಪಡೆದ ಲಾಡ್

ಬೆಂಗಳೂರು,ಜೂ.೪:ರೈಲು ದುರಂತ ನಡೆದಿರುವ ಒಡಿಶಾದ ಬಾಲಸೂರ್‌ಗೆ ತೆರಳಿರುವ ರಾಜ್ಯದ ಕಾರ್ಮಿಕ ಸಚಿವ ಸಂತೋಷ್‌ಲಾಡ್ ಅವರು ದುರಂತ ಸ್ಥಳದಲ್ಲಿ ಸ್ಥಾಪಿಸಿರುವ ಕಂಟ್ರೋಲ್ ರೂಂಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆದುಕೊಂಡರು.
ಸಚಿವ ಸಂತೋಷ್‌ಲಾಡ್ ಅವರು ಒಡಿಶಾದ ಮುಖ್ಯಕಾರ್ಯದರ್ಶಿ ಪ್ರದೀಪ್ ಜೆನ್ನಾ ಮತ್ತು ಇತರ ಅಧಿಕಾರಿಗಳನ್ನು ವಿಪತ್ತು ನಿರ್ವಹಣಾ ತುರ್ತು ಕಂಟ್ರೋಲ್ ರೂಂನಲ್ಲಿ ಭೇಟಿ ಮಾಡಿ, ಸಭೆ ನಡೆಸಿ ಈಗಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡರು.
ದುರಂತದಲ್ಲಿ ಸಿಲುಕಿದ್ದ ಕನ್ನಡಿಗರನ್ನು ರಕ್ಷಿಸಿ ರಾಜ್ಯಕ್ಕೆ ಕಳುಹಿಸುವ ಕೆಲಸದಲ್ಲಿ ಸಚಿವ ಸಂತೋಷ್‌ಲಾಡ್ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್‌ರಾಜನ್ ನಿರತರಾಗಿದ್ದಾರೆ. ಹಾಗೆಯೇ, ಸಂತೋಷ್‌ಲಾಡ್ ಅವರು ರೈಲ್ವೆ ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವವರಲ್ಲಿ ಕನ್ನಡಿಗರು ಇದ್ದಾರೆಯೇ ಎಂಬ ಬಗ್ಗೆಯೂ ಆಸ್ಪತ್ರೆಗೂ ಭೇಟಿ ನೀಡಿ ಮಾಹಿತಿಗಳನ್ನು ಪಡೆದುಕೊಂಡರು. ಹಾಗೆಯೇ ಕೆಲವು ಗಾಯಾಳುಗಳ ಯೋಗಕ್ಷೇಮವನ್ನು ವಿಚಾರಿಸಿದರು.
ದುರಂತದ ಹಿನ್ನೆಲೆಯಲ್ಲಿ ಬಾಲಸೂರ್‌ನಲ್ಲಿ ಸಿಲುಕಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆತರುವ ಕಾರ್ಯದಲ್ಲಿ ಸಂತೋಷ್‌ಲಾಡ್ ನಿರತರಾಗಿದ್ದು, ಸುಮಾರು ೮೦ ಕನ್ನಡಿಗರು ರಾಜ್ಯಕ್ಕೆ ಮರಳುತ್ತಿದ್ದಾರೆ. ೨ ವಿಮಾನಗಳ ಮೂಲಕ ೮೦ ಕನ್ನಡಿಗರನ್ನು ಬೆಂಗಳೂರಿಗೆ ಕರೆತರುವ ಕೆಲಸ ನಡೆದಿದ್ದು, ಇಂದು ಬೆಳಿಗ್ಗೆ ೨ ವಿಮಾನಗಳಲ್ಲಿ ಕನ್ನಡಿಗರನ್ನು ಕರೆತರಲಾಗಿದ್ದು, ಅವರಲ್ಲ ಸುಮಾರು ೧೮ ಮಂದಿ ಫ್ಲೈ ಬಸ್ ಮೂಲಕ ಮೈಸೂರಿಗೆ ತೆರಳಿದ್ದು, ಉಳಿದಂತೆ ಹಲವರು ಹಾಸನ, ಚಿಕ್ಕಮಗೂರಿಗೆ ಪ್ರಯಾಣಿಸಿದ್ದಾರೆ. ಇವರ ಪ್ರಯಾಣಕ್ಕೆ ರಾಜ್ಯಸರ್ಕಾರ ಎಲ್ಲ ವ್ಯವಸ್ಥೆ ಮಾಡಿದ್ದು, ವಿಮಾನ ನಿಲ್ದಾಣದಲ್ಲಿ ಸಚಿವ ಸಂತೋಷ್‌ಲಾಡ್ ಅವರ ಆಪ್ತ ಸಿಬ್ಬಂದಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದು, ರೈಲು ದುರಂತ ಸ್ಥಳದಿಂದ ಬಂದವರನ್ನು ಅವರವರ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿದರು.