ಹುಬ್ಬಳ್ಳಿ,ಜೂ3: ಒಡಿಸ್ಸಾ ರೈಲು ದುರಂತ ಬಹಳಷ್ಟು ದುರ್ದೈವ ಸಂಗತಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಭಾರತೀಯ ರೈಲ್ವೆಯಲ್ಲಿ ಯಾವುದೇ ಅಪಘಾತ ನಡೆದಿದ್ದಿಲ್ಲ. ಈ ದೊಡ್ಡ ಅಪಘಾತ ಬಹಳ ನೋವು ತರಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈ ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಎಲ್ಲ ರೀತಿಯ ಸಹಾಯ ಮಾಡುತ್ತಿದೆ. ಬಹಳಷ್ಟು ಜಾಗೃತರಾಗಿದ್ದರೂ ಈ ಅಪಘಾತ ನಡೆದಿದೆ. ಇದರ ಬಗ್ಗೆ ಸಮಗ್ರವಾಗಿ ತನಿಖೆ ನಡೆಯಲಿದೆ ಎಂದರು.
ಕಾಂಗ್ರೆಸ್‍ನವರು ಅಧಿಕಾರಕ್ಕೆ ಬಂದ ತಂದ ತಕ್ಷಣ ಎಲ್ಲ ಉಚಿತವಾಗಿ ನೀಡುತ್ತೇವೆ ಎಂದು ಹೇಳಿದ್ದರು. ಈಗ 200 ಯೂನಿಟ್ ಸರಾಸರಿ ಅಂತ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಅವರು ಹರಿಹಾಯ್ದರು.
ಮೊದಲು ನನಗೂ ಉಚಿತ, ನಿನಗೂ ಉಚಿತ, ಬಸಯ್ಯಗೂ ಹಾಗೂ ರಂಗಯ್ಯಗೂ ಉಚಿತ ಅಂತ ಹೇಳಿದ್ದರು. ಯುವ ನಿಧಿ ಗ್ಯಾರಂಟಿ ಬಗ್ಗೆ ಪ್ರಣಾಳಿಕೆಯಲ್ಲಿ ಯಾವುದೇ ಷರತ್ತು ವಿಧಿಸಿರಲಿಲ್ಲ. ಆದರೆ ಈಗ ಹಲವು ಗೊಂದಲಗಳಿವೆ ಎಂದು ಜೋಶಿ ಹೇಳಿದರು.
ಎಲ್ಲರಿಗೂ ಕೊಟ್ಟ ಹಾಗೇ ಆಗಿರಬೇಕು ಆದರೆ ಯಾರಿಗೂ ಸಿಕ್ಕಿರಬಾರದು ಎಂಬ ಲೆಕ್ಕಾಚಾರ ಕಾಂಗ್ರೆಸ್ ಸರ್ಕಾರದ್ದಾಗಿದೆ. ಗೃಹ ಲಕ್ಷ್ಮೀ ಯಾರು ಅಂತ ನಿರ್ಧಾರ ಮಾಡಿ ಅಂತ ಜನರಿಗೇ ಬಿಟ್ಟಿದ್ದಾರೆ. ಇನ್ನೂ ಜೂ. 15 ರ ವರಗೆ ಹಲವಾರು ಬದಲಾವಣೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ನುಡಿದರು.
ಬಸ್ ಗ್ಯಾರಂಟಿ ಬಿಟ್ಟು ಉಳಿದಿರುವ ನಾಲ್ಕು ಭರವಸೆಗಳು ಗೊಂದಲದ ಗೂಡಾಗಿವೆ. ಉಚಿತ ಭರವಸೆಯಿಂದ ಆರ್ಥಿಕ ವ್ಯವಸ್ಥೆ ಏನು ಆಗುತ್ತದೆ ಎಂದು ಎಲ್ಲಿಯೂ ಸ್ಪಷ್ಟ ಪಡಿಸಿಲ್ಲ. ಇದು ಕಣ್ಣೊರೆಸುವ ತಂತ್ರ ಎಂದು ಅವರು ಹೇಳಿದರು.
ಹತ್ತು ಕೆಜಿ ಅಕ್ಕಿ ವಿತರಣೆ ಬಗ್ಗೆ ಸ್ಪಷ್ಟತೆ ಇಲ್ಲ. ಐದು ಕೆಜಿ ಅಕ್ಕಿ ಕೇಂದ್ರ ಸರ್ಕಾರ ನೀಡುತ್ತದೆ. ಇದನ್ನು ಪ್ರಾಮಾಣಿಕವಾಗಿ ಹೇಳಲಿ ಎಂದು ಅವರು ಹೇಳಿದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆಯ ರಾಜ್ಯ ಸರ್ಕಾರದ ಪೆÇ್ರೀತ್ಸಾಹ ಧನ ಮತ್ತು ಹಾಲಿನ ಪೆÇ್ರೀತ್ಸಾಹ ಧನ ವಾಪಸು ತೆಗದುಕೊಳ್ಳುವ ಸುದ್ದಿ ಹರಿದಾಡುತ್ತಿದೆ. ಹೀಗಾಗಿ ಎಲ್ಲಾ ಪ್ರಶ್ನೆಗಳಿಗೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷದವರು ಇಷ್ಟು ದಿನ ದೇಶದಲ್ಲಿ ನಿರುದ್ಯೋಗಿಗಳಾಗಿದ್ದರು. ಈಗ ಕರ್ನಾಟಕದಲ್ಲಿ ಉದ್ಯೋಗ ಸಿಕ್ಕಿದೆ. ಹೀಗಾಗಿ ಕಾಂಗ್ರೆಸ್ ದೊಡ್ಡ ಪ್ರಮಾಣದಲ್ಲಿ ಹಾರಾಟ ಮಾಡುತ್ತಿದೆ. ಇದಕ್ಕೆ ಜನ ಲೋಕಸಭೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಜೋಶಿ ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಸಂಸತ್‍ನಲ್ಲಿ ಮತ್ತು ಅನೇಕ ಕಡೆ ವಿರೋಧ ಪಕ್ಷದ ನಾಯಕರಾಗಲು ಸಹ ಅರ್ಹತೆ ಇಲ್ಲ.ಇದನ್ನು ಅವರು ಮರೆಯ ಬಾರದು.ಈ ಅಹಂಕಾರ ಸರಿಯಲ್ಲ ಎಂದು ಅವರು ಚಾಟಿ ಬೀಸಿದರು.
ಇನ್ನೂ ಎರಡು ಮೂರುದಿಗಳಲ್ಲಿ ರಾಜ್ಯ ವಿಪಕ್ಷ ನಾಯಕ ಯಾರು ಎಂಬುದು ತೀರ್ಮಾನವಾಗುತ್ತದೆ ಎಂದ ಅವರು, ಕುಸ್ತಿ ಪಟುಗಳ ಸಮಸ್ಯೆ ಬಗ್ಗೆ ಅನುರಾಗ್ ಸಿಂಗ್ ಠಾಕೂರ್ ಸಾಕಷ್ಟು ಮಾತುಕತೆ ಮಾಡಿದ್ದಾರೆ. ಹೀಗಿದ್ದರೂ ಕುಸ್ತಿಪಟುಗಳು ಮಾತು ಕೇಳುತ್ತಿಲ್ಲ. ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.