ರೈಲು ಓಡದೆ ಹಳಿ ತಪ್ಪಿದ ಬಡವರ ಬದುಕು

 • ಟಿ.ಎಂ. ಜಗದೀಶ್
  ಅರಸೀಕೆರೆ, ನ. ೨- ಕೋವಿಡ್-೧೯ ವೈರಸ್ ಸೋಂಕಿನ ಅಡ್ಡ ಪರಿಣಾಮಗಳು ಒಂದೆರಡಲ್ಲ, ಸಾಮಾನ್ಯ ಜನರಿಗೆ ಯಾವೆಲ್ಲ ರೀತಿಯಲ್ಲಿ ಕೊರೊನಾ ವೈರಸ್ ಹಾಗೂ ಲಾಕ್‌ಡೌನ್ ಪರಿಣಾಮ ಬೀರಿವೆ ಎಂದು ವಿಶ್ಲೇಷಿಸುತ್ತ ಹೊರಟರೆ ಅದರ ತೀವ್ರತೆ ಅರ್ಥವಾಗುತ್ತಾ ಹೋಗುತ್ತದೆ.
  ಮೈಸೂರಿನಿಂದ ಅರಸೀಕೆರೆ ಮಾರ್ಗವಾಗಿ ಶಿವಮೊಗ್ಗಕ್ಕೆ ಪ್ರತಿದಿನ ಐದಾರು ರೈಲುಗಳು ಸಂಚಾರ ಮಾಡುತ್ತಿದ್ದವು. ಪ್ರತಿ ದಿನವೂ ಸಾವಿರಾರು ಜನರು ಎರಡು ನಗರಗಳ ನಡುವೆ ಸಂಚಾರ ಮಾಡುತ್ತಿದ್ದರು. ಮೈಸೂರಿನಿಂದ ಹೊರಟ ರೈಲು ಕೆ.ಆರ್.ನಗರ, ಹೊಳೆನರಸೀಪುರ, ಹಾಸನ, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಮೂಲಕ ತಾಳಗುಪ್ಪ ತಲುಪುತ್ತಿತ್ತು.
  ಮೈಸೂರಿನಿಂದ ಅರಸೀಕೆರೆ ಮಾರ್ಗವಾಗಿ ಶಿವಮೊಗ್ಗಕ್ಕೆ ಬರುವುದು ಕೇವಲ ೮೦ ರೂಪಾಯಿ ಪ್ರಯಾಣದ ವೆಚ್ಚ ಆಗುತ್ತಿತ್ತು. ಇದೀಗ ಮೈಸೂರು ಹಾಗೂ ಶಿವಮೊಗ್ಗ ನಡುವಿನ ರೈಲು ಸಂಚಾರ ನಿಂತು ಹೋಗಿದೆ. ಲಾಕ್‌ಡೌನ್ ಆರಂಭದಲ್ಲೇ ನಿಂತು ರೈಲು ಸಂಚಾರ ಇನ್ನೂ ಪ್ರಾರಂಭವಾಗಿಲ್ಲ. ಮೈಸೂರಿನಿಂದ ಅರಸೀಕೆರೆ ಮಾರ್ಗವಾಗಿ ಶಿವಮೊಗ್ಗಕ್ಕೆ ಬಸ್ಸಿನಲ್ಲಿ ಹೋಗಬೇಕೆಂದರೆ ೨೨೦ ರೂಪಾಯಿಗಳನ್ನು ಕೊಡಬೇಕು.
  ಸರ್ಕಾರಿ ನೌಕರರು, ವಿದ್ಯಾರ್ಥಿಗಳು, ಕಾರ್ಖಾನೆ ಕೆಲಸಗಾರರು, ರೈತರು ಕೋರ್ಟ್-ಕಚೇರಿ ಓಡಾಟ ಸೇರಿದಂತೆ ಎಲ್ಲರ ಜೀವನಾಡಿಯಾಗಿದ್ದ ರೈಲುಗಳ ಸಂಚಾರ ಯಾವಾಗ ಆರಂಭವಾಗುತ್ತದೆ ಎಂದು ಗೊತ್ತಿಲ್ಲ. ಹಾಗೆ ನೋಡಿದರೆ ರಾಜ್ಯ ರಸ್ತೆ ಸಾರಿಗೆ ದರವು ದುಬಾರಿ. ಸಾಮಾಜಿಕ ಅಂತರ ಪಾಲನೆಯೂ ಕಷ್ಟ. ರೈಲಿನಲ್ಲಿ ದರ ಕಡಿಮೆ, ದೂರದಲ್ಲಿ ಕುಳಿತು ಆರಾಮವಾಗಿ ಪ್ರಯಾಣ ಮಾಡಬಹುದು. ಇಷ್ಟಾದರೂ ರೈಲುಗಳ ಸಂಚಾರ ಆರಂಭವಾಗಿಲ್ಲ.
  ಇದರ ನಡುವೆ ರೈಲುಗಳ ಸಂಚಾರ ಸ್ಥಗಿತದಿಂದಾಗಿ ನಿಜವಾಗಿಯೂ ಸಂಕಷ್ಟಕ್ಕೆ ಸಿಲುಕಿರುವುದು ಮಾರಾಟಗಾರರು ತಾಜಾ ಹಣ್ಣು ಹಾಗೂ ತರಕಾರಿಗಳನ್ನು ರೈಲಿನಲ್ಲಿ ಮಾರಾಟ ಮಾಡಿ ಸಂಸಾರ ಸಾಗಿಸುತ್ತಿದ್ದ ಮಾರಾಟಗಾರರು ಈಗ ಕಂಗಾಲಾಗಿ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.
  ಇಂಟರ್ ಸಿಟಿ ರೈಲು ಇಲ್ಲ, ಪ್ಯಾಸೆಂಜರ್ ರೈಲು ಇಲ್ಲ, ಕೇವಲ ಗೂಡ್ಸ್ ರೈಲು ಸಂಚರಿಸಿದರೆ ರೈತರು, ಮಾರಾಟಗಾರರ ಪಾಡೇನು? ರೈತರು ಬೆಳೆದ ತಾಜಾ ಬೆಳೆ ನೇರವಾಗಿ ರೈಲುಗಳಲ್ಲಿ ಮಾರಾಟವಾಗುತ್ತಿತ್ತು. ದಿನಕ್ಕೆ ಸಾವಿರಾರು ಮಂದಿ ರೈಲಿನಲ್ಲಿ ಓಡಾಡುತ್ತಿದ್ದರು, ರೈಲುಗಳು ತುಂಬಿ ತುಳುಕುತ್ತಿದ್ದವು. ಆಗ ವ್ಯಾಪಾರಕ್ಕೆ ಏನು ಕೊರತೆ ಇರಲಿಲ್ಲ. ಕೋವಿಡ್-೧೯ ವೈರಸ್ ಪರಿಸ್ಥಿತಿಯಿಂದ ಜೀವನ ಸಾಗಿಸುವುದು ಶೋಚನೀಯವಾಗಿದೆ.
  ರೈತರು ಬೆಳೆದ ಬೆಳೆ ಸಾಗಾಟಕ್ಕೆ ತೊಂದರೆ ಮೈಸೂರು ಶಿವಮೊಗ್ಗದ ಆಸ್ಪತ್ರೆಯನ್ನೇ ನಂಬಿದ್ದ ಬಡವರಿಗೂ ಸಂಕಷ್ಟ ಕಚೇರಿ ವ್ಯವಹಾರಕ್ಕೆ ಹೋಗುವವರಿಗೂ ಅಡ್ಡಿ, ಹೀಗೆ ಈ ಭಾಗದ ಹಲವು ಸಮಸ್ಯೆಗಳಿಗೆ ಪರಿಹಾರ ಹೇಳುವ ರೈಲು ಸಂಚಾರ ನಿಂತು ಹೋಗಿ ಅಭಿವೃದ್ಧಿ ಚಕ್ರವೇ ಸ್ತಬ್ಧವಾಗಿದೆ.