ರೈಲುಗಳಲ್ಲಿ ಲ್ಯಾಪ್‌ಟಾಪ್ ಕಳವು ಅಡುಗೆಭಟ್ಟ ಬಂಧನ

ಬೆಂಗಳೂರು,ಏ.೧೭-ರೈಲುಗಳಲ್ಲಿ ಪ್ರಯಾಣಿಕರ ಲ್ಯಾಪ್‌ಟಾಪ್,ಚಿನ್ನ,ಬೆಳ್ಳಿ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದ ಖತರ್ನಾಕ್ ಅಡುಗೆಭಟ್ಟನನ್ನು ಬಂಧಿಸಿರುವ ರೇಲ್ವೆ ಪೊಲೀಸರು ೧೦.೨೮ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಿದ್ದಾರೆ.
ಮೈಸೂರು ಬಸವೇಶ್ವರನಗರದ ಸುಧೀಂದ್ರ (೩೪)ಬಂಧಿತ ಆರೋಪಿಯಾಗಿದ್ದು, ಆತನಿಂದ ೮ ಲ್ಯಾಪ್‌ಟಾಪ್ ೧೧ ಮೊಬೈಲ್ ಗಳು ಸೇರಿ ೧೦.೨೮ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಸೌಮ್ಯಲತಾ ಅವರು ತಿಳಿಸಿದ್ದಾರೆ.
ಕಳೆದ ಮಾ. ೧೩ ರಂದು ಸೈಡರ್ ಕಂಪನಿಯಲ್ಲಿ ಎಲೆಕ್ಟಿಕಲ್ ಇಂಜಿನಿಯರ್ ಆಗಿದ್ದ ಕಾಸರಗೋಡಿನ ಟ್ರಿಸಿಯಾ ಲವಿಟ ಅವರು ಪತಿಯೊಂದಿಗೆ ಪುತ್ತೂರು ರೈಲ್ವೆ ನಿಲ್ದಾಣದಿಂದ ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊರಟು ಮೈಸೂರು ರೈಲು ನಿಲ್ದಾಣಕ್ಕೆ ಹತ್ತಿರದಲ್ಲಿ ನೋಡಿಕೊಂಡಾಗ ಬ್ಯಾಗ್ ಹಾಗೂ ಅದರಲ್ಲಿದ್ದ ಲ್ಯಾಪ್‌ಟಾಪ್, ರೆಡ್ ಮೀ ಮೊಬೈಲ್, ಚಿನ್ನದ ಕರಿಮಣಿ ಚೈನ್ ಜಿಯೋ ಡಾಂಗಲ್, ವಾಚ್ ಎರಡು ಎಟಿಎಂ ಕಾರ್ಡ್‌ಗಳನ್ನು ಕಳ್ಳತನ ಮಾಡಲಾಗಿತ್ತು.
ಈ ಸಂಬಂಧ ನೀಡಿದ ದೂರಿನ ಮೇರೆಗೆ ಮೈಸೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರು ಮೈಸೂರು ರೈಲು ನಿಲ್ದಾಣದಲ್ಲಿ ತಪಾಸಣೆ ನಡೆಸುವಾಗ ಅನುಮಾನಾಸ್ಪದವಾಗಿ ಲ್ಯಾಪ್‌ಟಾಪ್ ಬ್ಯಾಗ್ ಹಿಡಿದುಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆತನಿಂದ ಕಳವು ಮಾಡಿದ್ದ ೮ ಲ್ಯಾಪ್‌ಟಾಪ್ ಗಳು ೯ ಮೊಬೈಲ್‌ಗಳು ಸೇರಿ ೧೦.೨೮ ಲಕ್ಷ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.