ತಿರುವನಂತಪುರಏ.೯- ರೈಲಿನೊಳಗೆ ಬೆಂಕಿ ಹಚ್ಚಿ ಮೂವರ ಸಾವಿಗೆ ಕಾರಣವಾದ ಭಯಾನಕ ಘಟನೆ ಸುಲಿಗೆ ಉದ್ದೇಶ ಹೊಂದಿರಲಿಲ್ಲ. ಬದಲಾಗಿ ಇಡೀ ರೈಲಿಗೆ ಬೆಂಕಿ ಹಚ್ಚುವ ಭಾರೀ ಸಂಚು ಅಡಗಿದ್ದ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ.
ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮತ್ತು ಐಬಿ (ಇಂಟೆಲಿಜೆನ್ಸ್ ಬ್ಯೂರೋ)ಗೆ ಇಂಥದ್ದೊದು ಸ್ಫೋಟಕ ಸುಳಿವು ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರ ಆಲಪ್ಪುಳ- ಕಣ್ಣೂರು ಎಕ್ಸ್‌ಪ್ರೆಸ್ ರೈಲು ಸಂಚರಿಸುತ್ತಿದ್ದ ವೇಳೆ ಬಳಿ ವ್ಯಕ್ತಿಯೊಬ್ಬ ಪ್ರಯಾಣಿಕರ ಮೇಲೆ ಪೆಟ್ರೋಲ್ ವಸ್ತು ಎರಚಿ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಘಟನೆಯಲ್ಲಿ ಹಲವರಿಗೆ ಸುಟ್ಟಗಾಯಗಳಾಗಿದ್ದವು. ಆದರೆ ಬೆಂಕಿ ಕಂಡು ಹೆದರಿದ್ದ ಮೂವರು ರೈಲಿನಿಂದ ಕೆಳಗೆ ಹಾರಿ ಸಾವನ್ನಪ್ಪಿದ್ದರು. ಘಟನೆ ಸಂಬಂಧ ಎರಡು ದಿನಗಳ ಬಳಿಕ ದೆಹಲಿ ಮೂಲದ ಶಾರುಖ್ ಸೈಫಿ ನನ್ನು ಬಂಧಿಸಲಾಗಿತ್ತು. ಮೊದಲಿಗೆ ಇದೊಂದು ಸುಲಿಗೆ ದಾಳಿ ಇರಬಹುದು ಎಂದು ಶಂಕಿಸಲಾಗಿತ್ತು.
ಭಾರೀ ದುಷ್ಕೃತ್ಯ:
ಆದರೆ ಇದೀಗ ತನಿಖಾ ಸಂಸ್ಥೆಗಳು ಬೆಂಕಿ ಹಚ್ಚಿದ ಘಟನೆ ಹಿಂದೆ ದೊಡ್ಡ ಸಂಚು ಅಡಗಿದೆ. ಇದು ಕೇವಲ ಒಬ್ಬನ ಕೃತ್ಯವಲ್ಲ. ಇದರ ಹಿಂದೆ ದೊಡ್ಡ ತಂಡ ಕೆಲಸ ಮಾಡಿದೆ ಎಂಬ ಮಾಹಿತಿಯನ್ನು ಕಲೆ ಹಾಕಿದೆ. ದೇಶ ವಿರೋಧಿ ಮನಸ್ಥಿತಿ ಹೊಂದಿರುವ ಪ್ರಭಾವಿಗಳ ಗುಂಪೊಂದು ಸೈಫಿ ಮೇಲೆ ಭಯೋತ್ಪಾದನಾ ಸಿದ್ಧಾಂತವನ್ನು ತುಂಬಿ ಆತನನ್ನು ದುಷ್ಕೃತ್ಯಕ್ಕೆ ಪ್ರೇರೇಪಿಸಿತ್ತು. ಜೊತೆಗೆ ಆತನಿಗೆ ದುಷ್ಕೃತ್ಯಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸಿತ್ತು. ಆತನ ಜೊತೆಗೆ ಇನ್ನೂ ಕೆಲವರು ಈ ಸಂಚಿನಲ್ಲಿ ಭಾಗಿಯಾಗಿದ್ದಾರೆ. ಜೊತೆಗೆ ಘಟನೆ ಬಳಿಕ ಪರಾರಿಯಾಗಲೂ ಸಂಚುಕೋರರು ಸೈಫಿಗೆ ನೆರವು ನೀಡಿದ್ದಾರೆ. ಎಂಬ ವಿಷಯ ತನಿಖಾ ಸಂಸ್ಥೆಗಳ ಗಮನಕ್ಕೆ ಬಂದಿದೆ.
ಇಡೀ ರೈಲಿಗೆ ಬೆಂಕಿ:
ಆತ ಇಡೀ ರೈಲಿಗೆ ಬೆಂಕಿ ಹಚ್ಚುವ ಉದ್ದೇಶದಿಂದ ಮೂರು ಬಾಟಲ್‌ಗಳಲ್ಲಿ ಪೆಟ್ರೋಲ್ ತುಂಬಿಕೊಂಡು ಬಂದಿದ್ದ. ಆದರೆ ಈ ಕೃತ್ಯ ಎಸಗಲು ಆತನಿಗೆ ಸೂಕ್ತ ತರಬೇತಿ ಇಲ್ಲದ ಕಾರಣ ಆತ ಈ ಕೆಲಸದಲ್ಲಿ ವಿಫಲನಾಗಿದ್ದಾನೆ ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ