ರೈಲಿಗಾಗಿ ಸಂಸದರ ಮನೆ ಮುಂದೆಧರಣಿಗೆ, ಹೋರಾಟ ಸಮಿತಿ ನಿರ್ಧಾರ

ಶಹಾಬಾದ:ಜೂ.19:ನಗರದ ರೈಲು ನಿಲ್ದಾಣದಲ್ಲಿ ಕೋವಿಡ್ ಲಾಕ್‍ಡೌನ್‍ಗಿಂತ ಮುಂಚೆ ನಿಲ್ಲುತ್ತಿದ್ದ ಎಲ್ಲಾ ರೈಲುಗಳನ್ನು ನಿಲ್ಲಿಸಲು ಅಗ್ರಹಿಸಿ, ಶೀಘ್ರದಲ್ಲಿ ಸಂಸದ ಡಾ.ಉಮೇಶ ಜಾಧವ ಅವರ ಮನೆಯ ಮುಂದೆ ಧರಣಿ ನಡೆಸಲು ಶಹಾಬಾದ ಆಭಿವೃದ್ದಿ ಹೋರಾಟ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು. ನಗರದ ಪ್ರವಾಸಿ ಮಂದಿರದಲ್ಲಿ ಹೋರಾಟ ಸಮಿತಿ ಗೌರವ ಅಧ್ಯಕ್ಷ ಶಿವರಾಜ ಇಂಗಿನಶೆಟ್ಟಿ ಅಧ್ಯಕ್ಷೆತೆಯಲ್ಲಿ ನಡೆದ ಸಭೆಯಲ್ಲಿ, ಜಿಲ್ಲೆಯಲ್ಲಿಯೇ ಎರಡನೇ ದೊಡ್ಡ ನಗರವಾಗಿರುವ ಶಹಾಬಾದ ರೈಲು ನಿಲ್ದಾಣದಲ್ಲಿ ಕರೋನಾ ಲಾಕ್‍ಡೌನಗಿಂತ ಮುಂಚೆ ನಿಲ್ಲುತ್ತಿದ್ದ ರೈಲುಗಳನ್ನು ನಿಲ್ಲಿಸಲು ಹಲವು ಬಾರಿ ಸಂಸದರನ್ನು ಭೇಟ್ಟಿ ಯಾಗಿದ್ದಲ್ಲೆ ಸೋಲಾಪುರ ವಿಭಾಗೀಯ ಪ್ರಬಂಧಕರು, ಸಹಾಯಕ ಪ್ರಬಂಧಕರು, ವಾಣಿಜ್ಯ ವಿಭಾಗದ ಪ್ರಬಂಧಕರನ್ನು ಭೇಟ್ಟಿ ಮಾಡಿ ಮನವಿ ಸಲ್ಲಿಸಿದರು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ಕಳೆದ ಕೆಲವು ವರ್ಷಗಳಿಂದ ಕಲಬುರಗಿ ರೈಲ್ವೆ ವಿಭಾಗದ ಬೇಡಿಕೆ ಹೆಚ್ಚುತ್ತಿದ್ದಂತೆ, ಸೋಲಾಪುರ ರೈಲ್ವೆ ವಿಭಾಗದ ಅಧಿಕಾರಿಗಳು ಲಾಬಿ ನಡೆಸಿ, ಶಹಾಬಾದ್‍ನಲ್ಲಿ ಕೆಲ ಎಕ್ಸಪ್ರೇಸ್, ಪ್ಯಾಸೇಂಜರ್ ರೈಲುಗಳನ್ನು ನಿಲ್ಲಿಸದೆ, ಕಲಬುರಗಿ ವಿಭಾಗದಲ್ಲಿ ರೈಲ್ವೆ ಇಲಾಖೆಗೆ ಹೆಚ್ಚಿನ ಅದಾಯ ಇಲ್ಲ ಎನ್ನುವದನ್ನು ಕೇಂದ್ರ ರೈಲ್ವೆ ಇಲಾಖೆಗೆ ಮಾಹಿತಿ ರವಾನಿಸುವ ಮೂಲಕ ವ್ಯವಸ್ಥಿತ ಷಡ್ಯಂತ್ರ ಸೋಲಾಪುರ ವಿಭಾಗ ನಡೆಸುತ್ತಿದೆ ಎಂದು ಸಭೆಯಲ್ಲಿ ಆರೋಪಿಸಲಾಯಿತು.

ಈ ಕುರಿತು ಕೇಂದ್ರ ರೈಲ್ವೆ ಇಲಾಖೆಯ ಅಧಿಕಾರಿಗಳ ಮುಂದೆ ಇಲ್ಲಿಯ ಸಮಸ್ಯೆಯನ್ನು ತಿಳಿಸುವಲ್ಲಿ ಈ ಭಾಗದ ಸಂಸದರಾದ ಡಾ.ಉಮೇಶ ಜಾಧವ ವಿಫಲವಾಗಿದ್ದು, ಶೀಘ್ರದಲ್ಲಿಯೇ, ಸಣ್ಣ ಪುಟ್ಟ ರೈಲು ನಿಲ್ದಾಣಗಳಲ್ಲಿ ಎಕ್ಸಪ್ರೆಸ್, ಪ್ಯಾಸೆಂಜರ್ ರೈಲುಗಳನ್ನು ನಿಲ್ಲಿಸುವ ಮೂಲಕ ಶಹಾಬಾದ ರೈಲು ನಿಲ್ದಾಣಕ್ಕೆ ಮಲತಾಯಿ ಧೋರಣೆ ತೋರಿಸುತ್ತಿರುವದನ್ನು ಪ್ರತಿಭಟಿಸಿ, ಸಂಸದರ ಮನೆಯ ಮುಂದೆ ಧರಣೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಶಹಾಬಾದ ತಾಲೂಕ ಕೇಂದ್ರವಾಗಿ ಸುಮಾರು 9 ವರ್ಷ ಕಳೆದರು ಇಲ್ಲಿಯವರೆಗೆ ತಾಲೂಕ ಕೇಂದ್ರದ ಕಚೇರಿಗಳು ಪ್ರಾರಂಭವಾಗಿಲ್ಲ, ಈ ಕುರಿತು ನೂತನ ಸರ್ಕಾರದ ಗಮನ ಸೆಳೆಯಲು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಂಕ್ ಖರ್ಗೆ ಅವರ ಬಳಿ ನಿಯೋಗದ ಮೂಲಕ ಭೇಟ್ಟಿಯಾಗಿ ತಾಲೂಕ ಕಚೇರಿಗಳನ್ನು ಶೀಘೃದಲ್ಲಿ ಪ್ರಾರಂಭಿಸಲು, ನಗರದ ಹೊರ ವಲಯದಲ್ಲಿ ನಿಂತು ಹೋದ ರಸ್ತೆ ಕಾಮಗಾರಿ, ರಸ್ತೆ ನಿರ್ಮಾಣ ಕಾರ್ಯಕೈಗೊಳ್ಳಲು ಮನವಿ ಸಲ್ಲಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ರೈಲ್ವೆ ಪೊಲೀಸ್ ಇಲಾಖೆಯ ಇಂಟಲಿಜೆನ್ಸಿ ವಿಭಾಗದ ಅಧಿಕಾರಿ ಅವಿನಾಶ ಪಾಟೀಲ ಅವರು ಉಪಸ್ಥಿತರಿದ್ದು. ಸಭೆಯ ನಿರ್ಣಯಗಳನ್ನು ಮುಂಬೈ ರೈಲ್ವೆ ಜನರಲ್ ಮ್ಯಾನೇಜರ್ ಅವರ ಗಮನಕ್ಕೆ ತರಲಾಗುವದು ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಮಹ್ಮದ ಉಬೇದುಲ್ಲಾ, ಹಿರಿಯರಾದ ಡಾ.ಎಂ.ಎ.ರಶೀದ, ಕನಕಪ್ಪ ದಂಡಗುಲಕರ್, ಹಾಶಮ್ ಖಾನ್, ಬಾಬುರಾವ ಪಂಚಾಳ, ಮಹಾ ಪ್ರಧಾನ ಕಾರ್ಯದರ್ಶಿ ಕೆ.ರಮೇಶ ಭಟ್ಟ, ಡಾ.ಅಹ್ಮದ ಪಟೇಲ, ಫಜಲ್ ಪಟೇಲ, ಶರಣು ಪಗಲಾಪುರ, ಕಿರಣಕುಮಾರ ಚವ್ಹಾಣ, ಲೋಹಿತ ಕಟ್ಟಿ, ರಾಜ ಮಹ್ಮದ ರಾಜಾ ಸೇರಿದಂತೆ ಇತರರು ಇದ್ದರು.