ರೈಫಲ್ ಶೂಟಿಂಗ್: ಭಾರತ ತಂಡದ ಆಯ್ಕೆ ಶಿಬಿರದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಭಾಗಿ

ತುಮಕೂರು, ಡಿ. ೯- ಕಳೆದ ನವೆಂಬರ್ ೧೫ ರಿಂದ ಡಿಸೆಂಬರ್ ೦೪ರವರಗೆ ನವದೆಹಲಿಯಲ್ಲಿ ನಡೆದ ೬೬ನೇ ರಾಷ್ಟ್ರ ಮಟ್ಟದ ರೈಫಲ್ ಶೂಟಿಂಗ್ ಚಾಂಪಿಯನ್ ಶಿಫ್‌ನಲ್ಲಿ ತುಮಕೂರಿನ ವಿವೇಕಾನಂದ ಶೂಟಿಂಗ್ ಆಕಾಡೆಮಿಯ ನಾಲ್ವರು ವಿದ್ಯಾರ್ಥಿನಿಯರು, ಒಂದು ಚಿನ್ನ ಮತ್ತು ಎರಡು ಕಂಚಿನ ಪದಕ ಪಡೆಯುವ ಮೂಲಕ ಭಾರತ ತಂಡದ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ನ್ಯಾಷನಲ್ ರೈಫಲ್ ಅಸೋಸಿಯೇಷನ್ ಹಾಗೂ ಸ್ಪೋರ್ಟ್ಸ್ ಅಥಾರಿಟಿ ಅಫ್ ಇಂಡಿಯಾ(ಸಾಯ್) ಅವರು ಆಯೋಜಿಸಿದ್ದ
ರಾಷ್ಟ್ರಮಟ್ಟದ ರೈಫಲ್ ಶೂಟಿಂಗ್ ಚಾಂಪಿಯನ್ ಶಿಫ್‌ನಲ್ಲಿ ವಿವೇಕಾನಂದ ಶೂಟಿಂಗ್ ಆಕಾಡೆಮಿಯ, ಪ್ರಸ್ತುತ ಖೆಲೋ ಇಂಡಿಯಾ ಸ್ಪೋರ್ಟ್ಸ್ ಎಕ್ಸಲೆಂಟ್ ಸೆಂಟರ್‌ನಲ್ಲಿ ತರಬೇತಿ ಪಡೆಯುತ್ತಿರುವ ೧೫ ವರ್ಷ ವಯಸ್ಸಿನ ಸಾನಿಕಾ ಸುಲ್ತಾನ್ ೧೦ ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ಕರ್ನಾಟಕದ ತಂಡ ವಿಭಾಗದಲ್ಲಿ ಒಂದು ಚಿನ್ನದ ಪದಕ ಹಾಗೂ ಎರಡು ಕಂಚಿನ ಪದಕಗಳೊಂದಿಗೆ ೬೨೭.೭ ಅಂಕಗಳನ್ನು ಪಡೆದು ಭಾರತ ತಂಡದ ಆಯ್ಕೆ ಶಿಬಿರಕ್ಕೆ ಸೇರ್ಪಡೆಯಾಗುತಿದ್ದಾರೆ.
ಈ ಚಾಂಪಿಯನ್ ಶಿಫ್‌ನಲ್ಲಿ ತುಮಕೂರಿನ ಮಹಾಲಕ್ಷ್ಮಿ ೬೨೨.೯, ಅತಿಥಿ ಜಿ. ೬೧೭.೭ ಮತ್ತು ವರ್ಷಿಣಿ ೬೧೪.೯ ಅಂಕಗಳನ್ನು ಪಡೆದು ೧೪ ವರ್ಷದೊಳಗಿನ ಭಾರತ ತಂಡದ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ ಶಿಫ್‌ನಲ್ಲಿ ಉತ್ತಮ ಅಂಕಗಳ ಜತೆಗೆ ಪದಕ ಪಡೆದ ಮಕ್ಕಳನ್ನು ವಿವೇಕಾನಂದ ಶೂಟಿಂಗ್ ಅಕಾಡೆಮಿಯ ತರಬೇತುದಾರ ಅನಿಲ್.ಟಿ.ಎಂ. ಅಭಿನಂದಿಸಿದ್ದಾರೆ.