ರೈತ ಹೋರಾಟದಲ್ಲಿ ಹುತಾತ್ಮ ರೈತರಿಗೆ ತಲಾ 25 ಲಕ್ಷ ರೂ.ಗಳ ಪರಿಹಾರಕ್ಕೆ ಒತ್ತಾಯ

ಕಲಬುರಗಿ,ನ.24: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಟದಲ್ಲಿ ಮಡಿದ ರೈತರ ಸಂತ್ರಸ್ತ ಕುಟುಂಬಗಳಿಗೆ ತಲಾ 25 ಲಕ್ಷ ರೂ.ಗಳ ಪರಿಹಾರ ಕೊಡಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರಪ್ಪ ಥಂಭೆ ಅವರು ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರವು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತು. ಇದರಿಂದಾಗಿ ದೇಶವ್ಯಾಪಿ ಕಳೆದ ಒಂದು ವರ್ಷದಿಂದ ನಿರಂತರ ಹೋರಾಟ ಆರಂಭಗೊಂಡಿತು. ದೆಹಲಿಯ ಗಡಿಯಲ್ಲಿ ಅಪಾರ ಸಂಖ್ಯೆಯ ರೈತರು ಸೇರಿ ಬೃಹತ್ ಹೋರಾಟ ಮುಂದುವರೆಸಿದ್ದರು. ಈ ಸಂದರ್ಭದಲ್ಲಿ ಸುಮಾರು 700ಕ್ಕೂ ಹೆಚ್ಚು ಹೋರಾಟ ನಿರತ ರೈತರು ಮೃತಪಟ್ಟಿದ್ದು, ಆ ಸಂತ್ರಸ್ತ ಕುಟುಂಬಗಳಿಗೆ ಕೇಂದ್ರ ಸರ್ಕಾರವು ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರವು ಮೊದಲೇ ಕೃಷಿ ಕಾಯ್ದೆಗಳನ್ನು ಜಾರಿಗೆ ತರದೇ ಹೋದಲ್ಲಿ ಇಂತಹ ಸಾವುಗಳು ಆಗುತ್ತಿರಲಿಲ್ಲ. ಆದ್ದರಿಂದ ರೈತರ ಸಾವಿಗೆ ಕೇಂದ್ರ ಸರ್ಕಾರವೇ ಹೊಣೆ ಹೊತ್ತುಕೊಂಡು ಪರಿಹಾರವನ್ನು ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಅತಿವೃಷ್ಟಿಯಿಂದ ತೊಗರಿ ಸೇರಿದಂತೆ ಬೆಳೆ ಹಾನಿಯಾಗಿದೆ. ಈವರೆಗೂ ಸಹ ರಾಜ್ಯ ಸರ್ಕಾರವು ಪರಿಹಾರ ನೀಡಿಲ್ಲ. ಆದ್ದರಿಂದ ಪ್ರತಿ ಎಕರೆಗೆ 20,000ರೂ.ಗಳ ಪರಿಹಾರವನ್ನು ನೀಡುವಂತೆ ಆಗ್ರಹಿಸಿದ ಅವರು, ತೊಗರಿಗೆ 8000ರೂ.ಗಳ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಧಾರಾಕಾರ ಮಳೆಯಿಂದಾಗಿ ಜಾನುವಾರುಗಳು ಕೊಚ್ಚಿಕೊಂಡು ಹೋಗಿವೆ. ಅಂತಹ ಸಂತ್ರಸ್ತ ಕುಟುಂಬಗಳಿಗೆ ತಲಾ 40,000ರೂ.ಗಳ ಪರಿಹಾರ ಕೊಡುವಂತೆ ಅವರು ಆಗ್ರಹಿಸಿದರು.
ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ ಅವರು, ಇನ್ನೂ ಇರುವ ಜನವಿರೋಧಿ ಕಾಯ್ದೆಗಳನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ದಸ್ತಗೀರ್ ದೇವಣಗಾಂವ್, ನಾಗರಾಜ್ ಕಣಸೂರ್, ಸಿದ್ದಲಿಂಗ್ ಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.