ರೈತ ಹಿತರಕ್ಷಣಾ ಪರಿವಾರದಿಂದ ಕರಾಳ ದಿನ ಆಚರಣೆ

ಧಾರವಾಡ ಮೇ.27-ಸಂಯುಕ್ತ ಕಿಸಾನ ಮೋರ್ಚಾದ ಕರೆಯ ಮೇರೆಗೆ ರೈತ ಹಿತರಕ್ಷಣಾ ಪರಿವಾರದಿಂದ ಕರಾಳ ದಿನ ಆಚರಿಸಲಾಯಿತು. ದೆಹಲಿಯ ಚಾರಿತ್ರಿಕ ರೈತರ ಹೋರಾಟವು ಮೇ. 26 ರಂದು 6 ತಿಂಗಳು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇಡೀ ದೇಶದಾದ್ಯಂತ ಕರಾಳ ದಿನಾಚರಣೆಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿತ್ತು. ಇದರ ಅಂಗವಾಗಿ ರೈತ ಹಿತರಕ್ಷಣಾ ಪರಿವಾರದ ಸಂಚಾಲಕ ಪಿ.ಎಚ್.ನೀರಲಕೇರಿ ಅವರ ನಿವಾಸದ ಮುಂದೆ ಕಪ್ಪು ಬಾವುಟ ಹಾರಿಸಿ ಬೆಂಬಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪರಿವಾರದ ಸಂಚಾಲಕ ಪಿ.ಎಚ್.ನೀರಲಕೇರಿ ಅವರು, ದೇಶದಲ್ಲಿ ಕೊರೊನಾವನ್ನು ಸಮರ್ಪಕವಾಗಿ ಸರಕಾರ ನಿರ್ವಹಿಸುವಲ್ಲಿ ವಿಫಲವಾಗಿದೆ. ಇನ್ನೊಂದೆಡೆ ಕೇಂದ್ರ ಸರಕಾರದ ಕೃಷಿ ವಿರೋಧಿ ನೀತಿ ಖಂಡಿಸಿ ದೆಹಲಿಯಲ್ಲಿ ರೈತರು ಕಳೆದ ಆರು ತಿಂಗಳಿಂದ ಹೋರಾಟ ನಡೆಸುತ್ತಿದ್ದಾರೆ. ಹೋರಾಟ ಆರಂಭ ಆದ ದಿನದಿಂದ ನೂರಾರು ರೈತರು ಸಾವನ್ನಪ್ಪಿದ್ದಾರೆ. ಆದರೆ, ದೇಶದ ಅನ್ನದಾತರ ಹೋರಾಟವನ್ನು ಗಂಭೀರವಾಗಿ ಪರಿಗಣಿಸದ ಕೇಂದ್ರದಲ್ಲಿನ ನರೇಂದ್ರ ಮೋದಿ ನೇತೃತ್ವದ ಸರಕಾರ ರೈತರ ಹೋರಾಟವನ್ನು ಹತ್ತಿಕ್ಕಲು ಸರ್ವಪ್ರಯತ್ನಗಳನ್ನೂ ಮಾಡಿದೆ, ಅಲ್ಲದೇ ವಾಸ್ತವ ಮರೆಮಾಚುವ ಮೂಲಕ ದೇಶದ ನಾಗರಿಕರನ್ನು ವಂಚಿಸುವ ತಂತ್ರ ಅನುಸರಿಸುತ್ತಿದೆ.
ರೈತರು ಸರಕಾರದ ಹೋರಾಟ ದಮನಕಾರಿ ಪ್ರವೃತ್ತಿಯ ಮಧ್ಯೆಯೂ ತಮ್ಮ ಹೋರಾಟ ಮುಂದುವರಿಸಿದ್ದಾರೆ.ಕೃಷಿ ವಲಯವನ್ನು ಮತ್ತು ರೈತರನ್ನು ನಾಶ ಮಾಡುವ ಸಂಚು ಜನತೆಗೆ ಅರ್ಥವಾಗಿದೆ. ಇದು ಸಂಯುಕ್ತ ಕಿಸಾನ ಮೋರ್ಚಾ ನೇತೃತ್ವದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಸಿಕ್ಕ ಗೆಲುವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಮುಖಂಡ ಸಿದ್ದಣ್ಣ ಕಂಬಾರ ಜೊತೆಗಿದ್ದರು.