ಕಲಬುರಗಿ,ಜು.1:2023ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ ಭೀಮಾ (ವಿಮಾ) ಯೋಜನೆಯ ಕುರಿತು ಗ್ರಾಮವಾರು ಮಾಹಿತಿ ತಲುಪಿಸಲು ಕೃಷಿ ಇಲಾಖೆ ಹಾಗೂ ಯುನಿರ್ವಸಲ್ ಜನರಲ್ ಇನ್ಸುರೆನ್ಸ್ ಕಂಪನಿಯ 5 ಪ್ರಚಾರ ವಾಹನಗಳಿಗೆ ಕಲಬುರಗಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭನ್ವರ್ ಸಿಂಗ್ ಮೀನಾ ಅವರು ಶನಿವಾರ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಪ್ರಚಾರ ವಾಹನಕ್ಕೆ ಚಾಲನೆ ನೀಡಿದರು.
ನಂತರ ಅವರು ಕೃಷಿ ವಿಮಾ ಯೋಜನೆ ಕುರಿತಂತೆ ಭಿತ್ತಿ ಪತ್ರಗಳನ್ನು (POSTER) ಸಹ ಬಿಡುಗಡೆಗೊಳಿಸಿದರು. ಬೆಳೆ ವಿಮೆ ಯೋಜನೆಯಡಿ ವಿಶೇಷವಾಗಿ ತೊಗರಿ, ಉದ್ದು, ಹೆಸರು ಬೆಳೆಗಳ ನೊಂದಣಿಗೆ 2023ರ ಜುಲೈ 31ರಂದು ಅಂತಿಮ ದಿನಾಂಕವಾಗಿದ್ದು, ರೈತರು ಅಂತಿಮ ದಿನಾಂಕದವರೆಗೆ ಕಾಯದ ತಮ್ಮ ಸಮೀಪದ ಬಾಪುಜಿ ಸೇವಾ ಕೇಂದ್ರ, ಗ್ರಾಮ್ ಒನ್ ಅಥವಾ ಬ್ಯಾಂಕ್‍ಗಳಿಗೆ ಭೇಟಿ ನೀಡಿ ವಿಮೆ ಕಂತನ್ನು ಪಾವತಿಸಿ ನೋಂದಣಿ ಮಾಡಿಕೊಳ್ಳುವ ಮೂಲಕ ಕೃಷಿ ವಿಮೆ ಯೋಜನೆಯ ಲಾಭವನ್ನು ಪಡೆಯಬೇಕೆಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ರೈತರಲ್ಲಿ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಗಳಿಂದ ಹಸ್ತಪ್ರತಿ ಬಿಡುಗಡೆ: ಶುಕ್ರವಾರ ಜರುಗಿದ ಕೃಷಿ ಸಂಬಂಧಿತ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ 2023ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆಯ ಕುರಿತು ಹಸ್ತ ಪತ್ರಿಗಳನ್ನು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಬಿಡುಗಡೆಗೊಳಿಸಿ ಸಾರ್ವಜನಿಕರಿಗೆ ಮಾಹಿತಿ ತಲುಪಿಸುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.