ರೈತ  ಸಮಸ್ಯೆಗಳ ಪರಿಹಾರಕ್ಕಾಗಿ ಕೊರ್ಲಗುಂದಿಯಲ್ಲಿ ಪ್ರತಿಭಟನೆ

(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.27: ರೈತರ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಎಐಕೆಕೆಕೆಎಂಎಸ್  ರೈತ ಸಂಘಟನೆ ಇಂದು ಕೋರ್ಲಗುಂದಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ  ಸಂಘಟನೆಯ ಜಿಲ್ಲಾ ಅಧ್ಯಕ್ಷ ಗೋವಿಂದ್ ಮಾತನಾಡಿ,  ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕ ನೆನಪಿನಾರ್ಥವಾಗಿ ಈ ವರ್ಷ ಸ್ವಾತಂತ್ರ‍್ಯ ಭಾರತದ ಅಮೃತ ಮಹೋತ್ಸವ ವನ್ನು ಆಚರಿಸಲು ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ . ಇದೆ ಸಂದರ್ಭದಲ್ಲಿ  ನಮ್ಮ ದೇಶದ ರೈತರ ಕಾರ್ಮಿಕರ ಮತ್ತು ದುಡಿಯುವ ಜನಗಳ ಬದುಕು ಅತ್ಯಂತ ಹೀನಾಯ ಸ್ಥಿತಿಗೆ ತಲುಪುವಂತೆ ಮಾಡುವ ಎಲ್ಲಾ ರೀತಿಯ ನೀತಿಗಳು ಜಾರಿಗೆ ಬರುತ್ತಿರುವುದು ಜನರಲ್ಲಿ ಆತಂಕ ಮೂಡಿಸುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಬೆಲೆಗಳು ಗಗನಕ್ಕೇರುತಿದ್ದು, ತಮ್ಮ ಜೀವನ ನಡೆಸಲು ಸಾಮಾನ್ಯ ಜನರು ಹೆಣಗಾಡುವಂತಾಗಿದೆ. ರೈತರಿಗೆ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿದ್ದ ಸಬ್ಸಿಡಿಯನ್ನು ನಿಲ್ಲಿಸುತ್ತಿರುವುದು ಸಂಕಷ್ಟದಲ್ಲಿರುವ ಜನರ ಮೇಲೆ ಬರೆ ಎಳೆದಂತಾಗಿದೆ ಎಂದರು.
ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದ ಗುರಳ್ಳಿ ರಾಜ ಮಾತನಾಡುತ್ತಾ  ವಿದ್ಯುತ್ ಮಸೂದೆ ೨೦೨೧, ಆಹಾರ ಪದಾರ್ಥಗಳ ಮೇಲೆ ವಿಧಿಸಿರುವ ಶೇ ೫ ರಷ್ಟು ಜಿ ಎಸ್ ಟಿ  ಹೇರಿಕೆ, ಕೃಷಿ ಉಪಕರಣಗಳ ಮೇಲಿನೆ ತೆರಿಗೆ ಹೆಚ್ಚಳ ಸೇರಿದಂತೆ ಕೇಂದ್ರ ಸರ್ಕಾರದ ಹಲವಾರು ನೀತಿಗಳು ಜನರ ಬದುಕನ್ನು ನಿರಾಸರೆಯಾಗಿಸಿವೆ.
ಆಹಾರ ಪದಾರ್ಥಗಳ ಮತ್ತು ಕೃಷಿ ಸಲಕರಣೆಗಳ ಮೇಲೆ ವಿಧಿಸಿರುವ ಜಿ. ಎಸ್. ಟಿ ಯನ್ನು ಹಿಂತೆಗೆದುಕೊಳ್ಳಬೇಕು,
ವಿದ್ಯುತ್ ಮಸೂದೆ ೨೦೨೧ನ್ನು ರದ್ದು ಗೊಳಿಸಬೇಕು,
ರೈತರು ಬೆಲೆ ಬೆಳೆಯಲು ತಗುಲಿದ ಒಟ್ಟು ವೆಚ್ಚದ ಒಂದೂವರೆ ಪಟ್ಟು ಮೊತ್ತ ಸಿಗುವಂತೆ ಕನಿಷ್ಠ ಬೆಂಬಲ ಬೆಲೆ ಯನ್ನು ಖಾತ್ರಿ ಪಡಿಸಬೇಕು, ರೈತರ ಹಿತಾಸಕ್ತಿ ಕಡೆಗಣಿಸಿರುವಂತ ಜನರಿಂದ ರೂಪಿಸಲ್ಪಟ್ಟಿರುವ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸುವ ಸಮಿತಿಯನ್ನು ಈ ಕೂಡಲೇ ವಿಸರ್ಜಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯ ಕೊಂಡಯ್ಯ ನಾಯ್ಡು, ಕೌನ್ಸಿಲ್ ಸದಸ್ಯ ಮಲ್ಲಪ್ಪ, ನಾಗರಾಜ ಗ್ರಾಮಸ್ತರಾದ ತಿಮ್ಮಪ್ಪ, ಮರೇಶ್, ಬಳ್ಳಾರಿ ಹೊನ್ನೂರಪ್ಪ, ಈಡಿಗರ ವೆಂಕಟೇಶ್,ಬಸವ , ಹುಲಿಯಪ್ಪ, ಚೆನ್ನಪ್ಪ ಬೆನಕಲ್, ರಾಮಲಿಂಗ, ರಮೇಶ್ ಸೇರಿದಂತೆ ಇತರರಿದ್ದರು