
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಆ.31:- ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ರೈತರಿಗಾಗಿ ಜಾರಿಗೆ ತಂದ ಕೃಷಿ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ವಾಪಸ್ ಸೇರಿದಂತೆ ರೈತ ಸಂಬಂಧಿ ಯೋಜನೆಗಳನ್ನು ರಾಜ್ಯ ಬಜೆಟ್‍ನಿಂದ ಕೈಬಿಟ್ಟಿರುವುದು ಖಂಡನೀಯ ಎಂದು ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ನವಿನ್ ಕುಮಾರ್ ಆರೋಪಿಸಿದರು.
ಬುಧವಾರ ಪಟ್ಟಣದ ತಾಲ್ಲೂಕು ಆಡಳಿತ ಭವನದ ಮುಂಭಾಗ ತಾಲ್ಲೂಕು ಬಿಜೆಪಿ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ರೈತರ ಹಿತ ಕಾಪಾಡುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನೀರಾವರಿಗೂ ಹಣ ಇಲ್ಲ, ಕಿಸಾನ್ ಸಮ್ಮಾನ್, ರೈತ ವಿದ್ಯಾನಿಧಿ, ಭೂಸಿರಿ ಸೇರಿ ಅನೇಕ ಯೋಜನೆಗಳು ರದ್ದಾಗಿವೆ.
ರೈತರ ಬೆನ್ನುಮೂಳೆ ಮುರಿಯಲು ರಾಜ್ಯ ಸರ್ಕಾರ ಮುಂದಾಗಿದೆ ಅಲ್ಲದೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಜನವಿರೋಧಿ ನೀತಿ ವಿರುದ್ಧ ಜನತೆ ಬೀದಿಗಿಳಿದಿದ್ದಾರೆ. ಇವರು ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲಿ ರಾಜ್ಯದ 42ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಪೂರಿತ ನೀರು ಸೇವಿಸಿ ಹಲವರು ಮೃತಪಟ್ಟಿದ್ದಾರೆ ಹಾಗಾಗಿ ಜನತೆಯ ಹಿತದೃಷ್ಟಿಯಿಂದ ಬಿಜೆಪಿಯ ಜನಪರ ಯೋಜನೆಗಳನ್ನು ಪುನರ್ ಸ್ಥಾಪಿಸಬೇಕು. ಕೇಂದ್ರ ಕನಿಷ್ಠ ಬೆಂಬಲ ಬೆಲೆ ಯೋಜನೆಯನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಕೂಡ ಬೆಂಬಲ ಬೆಲೆ ಯೋಜನೆ ಜಾರಿ ಮಾಡಬೇಕು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಂ.ರಾಜೇಗೌಡ ಮಾತನಾಡಿ ಕಿಸಾನ್ ಸಮ್ಮಾನ್ ಯೋಜನೆಯಡಿ ಬಿಜೆಪಿ ಸರ್ಕಾರ ಕೊಡುತ್ತಿದ್ದ 4 ಸಾವಿರ ರೂಪಾಯಿಯನ್ನು ಮುಂದುವರಿಸಿ. 6 ಸಾವಿರ ರೂ ಕೊಟ್ಟು ಕಾಂಗ್ರೆಸ್ ಸರ್ಕಾರ ತಮ್ಮ ಸಾಮಥ್ರ್ಯ ತೋರಿಸಬೇಕು, ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿ. ಕಂಟ್ರಾಕ್ಟರ್‍ಗಳು ಈಗಾಗಲೇ ಕಾಂಗ್ರೆಸ್ ಸರ್ಕಾರಕ್ಕೆ ಮುಖಕ್ಕೆ ಮಂಗಳಾರತಿ ಮಾಡುತ್ತಿದ್ದಾರೆ” ಎಂದು ಟೀಕಿಸಿದ ಅವರು. ನಮ್ಮ ರೈತರಿಗೆ ನೀರು ಕೊಟ್ಟು ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಕೊಡಿ, ಅನ್ನದಾತರಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ.
ಇದು ಬಜೆಟ್‍ನಲ್ಲೂ ಪ್ರತಿಫಲಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ರೈತವಿರೋಧಿ ನೀತಿಗಳೇ ಜಾರಿಗೊಳ್ಳುತ್ತವೆ.
ರೈತರ ವಿರುದ್ಧ ನಿಲುವು ಅವರದ್ದು. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿ 6 ಸಾವಿರವನ್ನು ಕೇಂದ್ರ, 4 ಸಾವಿರವನ್ನು ರಾಜ್ಯ ಬಿಜೆಪಿ ಸರ್ಕಾರ ನೀಡುತ್ತಿತ್ತು.
ರಾಜ್ಯ ನೀಡುವ ಮೊತ್ತವನ್ನು ಸ್ಥಗಿತಗೊಳಿಸಲಾಗಿದೆ. ವಿದ್ಯಾನಿಧಿ ಸೇರಿ ಅನೇಕ ಯೋಜನೆಗಳು ಸ್ಥಗಿತವಾಗಿವೆ. ಅವುಗಳನ್ನು ಮತ್ತೆ ಜಾರಿ ಮಾಡಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ವೀರಭಧ್ರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ರಾಜೇಂದ್ರ, ಮುಖಂಡರಾದ ಆರ್.ಟಿ.ಸತೀಶ್, ಲೋಕಪಾಲಯ್ಯ, ವಿಕ್ರಂ ರಾಜ್, ರವಿ, ಪಿ.ಕೆ.ರಾಘವೇಂದ್ರ, ಶುಭಾ ಗೌಡ, ಬಾನು, ರಮೇಶ್, ಚನ್ನಬಸವರಾಜು, ಅನಿಲ್ ಕುಮಾರ್, ಮೋಹನ್, ಶರವಣ, ಹುಣಸವಾಡಿ ನಾಗೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.