ರೈತ ಸಂಘವು ಯಾವುದೇ ಧರ್ಮ, ಜಾತಿಗೆ ಸೀಮಿತವಾಗಿಲ್ಲ: ಹೆಚ್.ಆರ್ ಬಸವರಾಜಪ್ಪ

ದಾವಣಗೆರೆ ಸೆ.6; ರೈತ ಸಂಘವು ಯಾವುದೇ ಧರ್ಮ, ಜಾತಿಗೆ ಸೀಮಿತವಲ್ಲ ಎಲ್ಲಾ ವರ್ಗದ ಜನರ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಎಚ್‌.ಆರ್. ಬಸವರಾಜಪ್ಪ ತಿಳಿಸಿದರು.ಇತ್ತೀಚಿಗೆ ಚನ್ನಗಿರಿ ತಾಲೂಕಿನ ಹಿರೇಕೋಗಲೂರು ಗ್ರಾಮದಲ್ಲಿ  ರೈತ ಸಂಘದ ನೂತನ ಗ್ರಾಮ ಶಾಖೆ ನಾಮಫಲಕ ಅನಾವರಣ ಹಾಗೂ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮಘಟಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಕೇಂದ್ರ ಸರಕಾರ ವಿದ್ಯುತ್ಅನ್ನು ಖಾಸಗೀಕರಣ ಮಾಡಲು ಹೊರಟಿದೆ. ಇದರಿಂದಾಗಿ ಬೆಸ್ಕಾಂ ಕಂಪನಿ ಕೈ ತಪ್ಪಲಿದೆ. ಸಂಬಂಧಿಸಿದ ಅಧಿಕಾರಿಗಳು ವಿದ್ಯುತ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವಂತೆ ಪ್ರತಿದಿನ ಮನೆ ಬಾಗಿಲಿಗೆ ಬಂದು ಪೀಡಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಪಂಪ್‌ಸೆಟ್ ವಿದ್ಯುತ್‌ಗೆ ಆಧಾರ್ ಕಾರ್ಡ್ ಜೋಡಣೆ ಮಾಡಿಸಬೇಡಿ ಎಂದು ಕರೆನೀಡಿದರು.ರೈತರು ಬೆಳೆದ ಬೆಳೆಗಳನ್ನು ಸರ್ಕಾರವೆ ರೈತರಿಂದ ಖರೀದಿಸಿ, 10 ಕೆ.ಜಿ ಅಕ್ಕಿಯ ಬದಲಾಗಿ 5 ಕೆಜಿ ಅಕ್ಕಿಯ ಜತೆ ಉತ್ತರ ಕರ್ನಾಟಕದವರಿಗೆ 3 ಕೆಜಿ ಜೋಳ, ದಕ್ಷಿಣ ಕರ್ನಾಟಕದವರಿಗೆ 3 ಕೆ.ಜಿ ರಾಗಿ ಹಾಗೂ 2 ಕೆ.ಜಿ ಸಿರಿಧಾನ್ಯಗಳನ್ನು ಕೊಡಬೇಕು ಎಂದರು.ಸಂಘದ ರಾಜ್ಯ ಕಾರ್ಯಾಧ್ಯಕ್ಷ ಕುರುವ ಗಣೇಶಪ್ಪ ಮಾತನಾಡಿ, ಬರಗಾಲ ಅಂತ ಹೆದರದೆ ಯಾವೊಬ್ಬ ರೈತರು ಆತ್ಮಹತ್ಯೆಗೆ ಶರಣಾಗಬೇಡಿ. ನಿಮ್ಮಗಳ ಎಷ್ಟೇ ಸಾಲ ಇರಲಿ ರೈತ ಸಂಘದ ನಿರಂತರ ಹೋರಾಟದಿಂದ ಸರಕಾರದ ಗಮನ ಸೆಳೆದು, ಎಲ್ಲಾ ಸಾಲ ಮನ್ನ ಮಾಡುವಂತೆ ಹೋರಾಡೋಣ ಎಂದು ಹೇಳಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರ ಗ್ರಾಮೀಣರು ಮತ್ತು ರೈತಾಪಿ ವರ್ಗದ ಜನರನ್ನು ಕೇಂದ್ರೀಕರಿಸಿ ಯೋಜನೆಗಳನ್ನು ರೂಪಿಸುತ್ತವೆ. ಆದರೆ, ಯೋಜನೆಗಳ ಪ್ರಯೋಜನವನ್ನು ರೈತರಿಗೆ ತಲುಪಿಸುವಲ್ಲಿ ಮತ್ತು ರೈತರ ಸಮಸ್ಯೆ ಆಲಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಹಿರಿಕೋಗಲೂರು ರೈತರು ಸಂಘಟಿತರಾಗಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.ಸಂಘದ ಜಿಲ್ಲಾಧ್ಯಕ್ಷ ಮರುಳಸಿದ್ದಪ್ಪ ಮಾತನಾಡಿ, ಚನ್ನಗಿರಿ ತಾಲೂಕಿನಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಬಲಿಷ್ಠ ಸಂಘಟನೆಯಾಗಿ ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು.ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಾ ಶಿವಕುಮಾರ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಹೊನ್ನೂರು ರಾಜು, ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯ್ಕ್, ಅಣ್ಣಪ್ಪ ಕಣಿವೆಬಿಳಚಿ, ಮಹಿಳಾಧ್ಯಕ್ಷರಾದ ಕುಮಧ್ವತಿ, ಹಸಿರುಸೇನೆ ಜಿಲ್ಲಾ ಸಂಚಾಲಕರಾದ ಅಭಿಲಾಷ್ ಎಂ, ಚನ್ನಗಿರಿ ತಾ ಅಧ್ಯಕ್ಷರಾದ ಮಾಲ್ಲಾಳ್ ತಿಪ್ಪಣ್ಣ, ಮಾಯಕೊಂಡ ಬೀರಪ್ಪ, ಬಸಮ್ಮ ಕೋಟೆ, ರವಿ ಹಳ್ಳಿ, ಸಂತೋಷ ಮಲಹಾಳ್, ಪ್ರಧಾನ ಕಾರ್ಯದರ್ಶಿ ಮಲ್ಲೆನಳ್ಳಿ ನಾಗರಾಜ್, ಹಾಗೂ ಗ್ರಾಮ ಘಟಕದ ನೂತನ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.