ರೈತ ಸಂಘದಿಂದ ಜನಪ್ರತಿನಿಧಿಗಳಿಗೆ ಹಲವು ಬೇಡಿಕೆಗಳ ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.27: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದಿಂದ ರಾಜ್ಯದಲ್ಲಿರುವ  ಕರ್ನಾಟಕ ಗ್ರಾಮೀಣ ಬ್ಯಾಂಕ್ ಗಳಲ್ಲಿ ರೈತರು ಪಡೆದ ಅಸಲಿನ ಮೇಲಿನ ಸಾಲದಲ್ಲಿನ ಶೇಕಡ 50% ರಷ್ಟು ಪಾವತಿಸಿಕೊಂಡು ಮರು ಸಾಲವನ್ನು ನೀಡಬೇಕೆಂದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಸಚಿವರು, ಶಾಸಕರಿಗೆ ಇಂದು ಮನವಿ ಪತ್ರ ಸಲ್ಲಿಸಲಾಗಿದೆ.
ನಗರದ ಕೆಜಿಬಿ ಪ್ರಧಾನ ಕಚೇರಿ‌ ಮುಂದೆ ಕಳೆದ 187 ದಿನದಿಂದ ಧರಣಿ ನಡೆಸುತ್ತಿರುವ ರೈತ ಸಂಘದವರು  ಜಿಲ್ಲೆಯ ನೂತನ  ಜನ ಪ್ರತಿನಿಧಿಗಳನ್ನು ಕರೆದು ಸನ್ಮಾನಿಸಿ ಬೇಡಿಕೆಗಳ ಮನವಿ ಸಲ್ಲಿಸಿ. ವೇದಾವತಿ ನದಿಗೆ ಆಣೆಕಟ್ಟು ನಿರ್ಮಾಣ ಮಾಡುವ ಬಗ್ಗೆಯೂ ಸಂಡೂರು ಘಟಕದ ರೈತ ಸಂಘದಿಂದ  ಯಶವಂತನಗರದಲ್ಲಿ ಹಾಕುತ್ತಿರುವ ಫೆಲೆಟ್ ಪ್ಲಾಂಟ್ ನಿರ್ಮಾಣದಿಂದ ಆಗುವ ಅನಾಹುತದ ಬಗ್ಗೆ ಸಚಿವ ನಾಗೇಂದ್ರ ಅವರಿಗೆ ಮನವರಿಕೆ ಮಾಡಲಾಯ್ತು.
ನಗರದ ಶಾಸಕ ನಾರಾ ಭರತ್ ರೆಡ್ಡಿ, ಕಂಪ್ಲಿ  ಶಾಸಕ ಜಿ.ಎನ್ ಗಣೇಶ್, ಸಿಂಧನೂರು ಶಾಸಕ ಹಂಪನ ಗೌಡ ಬಾದರ್ಲಿ, ಸಂಡೂರು ಶಾಸಕ ಈ ತುಕಾರಾಂ ಇವರುಗಳಿಗೆ ಸಹ ಮನವಿ ಸಲ್ಲಿಸಲಾಯ್ತು.
ಮನವಿಯನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ  ಗ್ರಾಮೀಣ ಬ್ಯಾಂಕ್ ನಲ್ಲಿ ರೈತರ ಅಸಲಿನ ಮೇಲೆ ಪಡೆದ ಸಾಲದಲ್ಲಿ ರಿಯಾಯಿತಿ ಕೊಡಿಸಲು ಬಳ್ಳಾರಿ ಜಿಲ್ಲೆಯ ಶಾಸಕರೊಂದಿಗೆ ಮತ್ತು ರೈತ ಸಂಘದ ನಿಯೋಗವನ್ನು  ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರೊಂದಿಗೆ ಬ್ಯಾಂಕ್ ಹಿರಿಯ ಅಧಿಕಾರಿಗಳು, ಹಣಕಾಸು ಇಲಾಖೆಯ ಮುಖ್ಯಸ್ಥರೊಂದಿಗೆ ಸಭೆಯನ್ನು ಅಧಿವೇಶನಕ್ಕೂ ಆರಂಭಕ್ಕೆ ಮುನ್ನವೇ ಏರ್ಪಡಿಸಿ ರೈತರ ಸಾಲಮನ್ನದ ಹೋರಾಟವನ್ನ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿ ಹೇಳಿದರು.  ಹಾಗೆಯೇ ವೇದಾವತಿ ನದಿಗೆ ಆಣೆಕಟ್ಟು ಕಟ್ಟುವ ಬಗ್ಗೆ ಈಗಾಗಲೆ ಒಂದು ಸುತ್ತಿನ ಸಭೆಯನ್ನು ಸಣ್ಣ ನೀರಾವರಿ ಸಚಿವ ಬೋಸರಾಜು ಇವರೊಂದಿಗೆ ಚರ್ಚಿಸಲಾಗಿದ್ದು ರೈತ ಸಂಘದ ಪದಾಧಿಕಾರಿಗಳ ನಿಯೋಗದ ಸಲಹೆ,ಸಹಾಯವನ್ನ ಪಡೆದುಕೊಂಡು ಚರ್ಚಿಸುವುದಾಗಿ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಕರೂರು ಮಾಧವ ರೆಡ್ಡಿ, ಚಾಗನೂರು ಸಿರಿವಾರ ಭೂ ಹೋರಾಟ ಸಮಿತಿಯ ಸಂಚಾಲಕರು ಹಾಗೂ ವಕೀಲರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಕ.ರೈ. ಸಂಘದ ಪ್ರಮುಖರಾದ ಲೇಪಾಕ್ಷಿ ಅಸುಂಡಿ, ಸಿದ್ದನಗೌಡ ಸಿಂಧನೂರು, ರಾಮನಗೌಡ್ರು, ರಾಜಶೇಖರ ಗೌಡ, ಅಮೀನ್ ಪಾಶ,ಉಮಾಪತಿ, ಕ್ರಿಸ್ಟಪ್ಪ, ಬಸವನ ಗೌಡ, ಮೇಟಿ ನಾಗರಾಜ ಗೌಡ, ಬಸವರಾಜ ಸ್ವಾಮಿ, ತಿಮ್ಮಾರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ ಜಾಲಿಹಾಳ್, ಶ್ರೀಶೈಲ ಆಲದಹಳ್ಳಿ, ನಾಯ್ಕರ ನಾಗರಾಜ್,ಲಿಂಗರಾಜ,ಹುಲುಗಯ್ಯ,ಸಂಜೀವ ರೆಡ್ಡಿ,ಮಹಿಳಾ ರೈತರಾದ ಅಂಬಮ್ಮ, ರೈತಮ್ಮ, ಇತರರು ಹಾಜರಿದ್ದರು