ರೈತ ಸಂಘಟನೆಗಳ ಬಲವರ್ಧನೆಗೆ ಕ್ರಮ : ಬಿಸಿ ಪಾಟೀಲ್

ಬೆಂಗಳೂರು,ಸೆ.17- ರಾಜ್ಯದಲ್ಲಿರುವ ರೈತ ಉತ್ಪಾದಕರ ಸಂಘಗಳ ಬಲವರ್ಧನೆ ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.

ವಿವಿಧ ಇಲಾಖೆಗಳಿಂದ ಒಟ್ಟು 393 ರೈತ ಉತ್ಪಾದಕರ ಸಂಸ್ಥೆಗಳಿದ್ದು, ಸರ್ಕಾರದಿಂದ ರಚಿಸಲಾಗಿರುವ ಆರ್ಥಿಕ ಮತ್ತು ಸಾಂಸ್ಥಿಕ ನೆರವು ನೀಡಿ ಅವುಗಳ ಅಭಿವೃಧ್ಧಿ ಮತ್ತು ಬಲವರ್ಧನೆಗೆ ಪ್ರಯತ್ನಿಸಲಾಗುತ್ತಿದೆ ಎಂದರು.

ಜಲಾಯನಯನ ಅಭಿವೃದ್ಧಿ ಇಲಾಖೆಯಿಂದ 130, ಜಲಾಯನಯನ ಅಭಿವೃದ್ಧಿ ಕೇಂದ್ರ ಪುರಸ್ಕೃತ ಯೋಜನೆ ವತಿಯಿಂದ 100, ಕೃಷಿ ಇಲಾಖೆಯಿಂದ 24, ತೋಟಗಾರಿಕೆ 100, ರೇಷ್ಮೆ 13 ಹಾಗೂ ಪಶುಸಂಗೋಪನೆ ಇಲಾಖೆಯಿಂದ 26 ಎಫ್.ಪಿ.ಓ ಸೇರಿದಂತೆ ರಾಜ್ಯದಲ್ಲಿ ಒಟ್ಟು 393 ರೈತ ಉತ್ಪಾದಕರ ಸಂಸ್ಥೆಗಳನ್ನು ತೆರೆಯಲಾಗಿದೆ.ಆದರೆ ವಿವಿಧ ಇಲಾಖೆಗಳ ಪ್ರಾಯೋಜಿತ ಎಫ್.ಪಿ.ಓಗಳನ್ನು ಆರಂಭದಲ್ಲಿ ಮುಚ್ಚುವ ಹಂತ ತಲುಪಿರುವುದು ಯಾವುದೂ ಸರ್ಕಾರಕ್ಕೆ ಗಮನಕ್ಕೆ ಬಂದಿಲ್ಲ ಎಂದರು.

ರಾಜ್ಯ ಸರ್ಕಾರದಿಂದ ರಚಿಸಲಾಗಿರುವ ರೈತ ಉತ್ಪಾದಕರ ಸಂಸ್ಥೆಗಳಿಗೆ ಆರ್ಥಿಕ ಮತ್ತು ಸಾಂಸ್ಥಿಕ ನೆರವು ನೀಡಲಾಗುತ್ತಿದ್ದು, ಅವುಗಳ ಅಭಿವೃಧ್ದಿ ಮತ್ತು ಬಲವರ್ಧನೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರದ ಆತ್ಮ ನಿರ್ಭರ್ ಭಾರತ ಅಭಿಯಾನದಡಿಯಲ್ಲಿ ಬರುವ ಪ್ರಧಾನಮಂತ್ರಿಗಳ ಕಿರು ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಯಡಿ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ 2020-21ನೇ ಸಾಲಿನಲ್ಲಿ 32.46 ಕೋ ರೂ ಅನುದಾನ ಒದಗಿಸಲಾಗಿದೆ. ತೋಟಗಾರಿಕೆ ಇಲಾಖೆಯಿಂದ ಪರಂಪರಾಗತ್ ಕೃಷಿ ವಿಕಾಸ ಯೋಜನೆಯಡಿ 11 ಸಾವಯವ ರೈತ ಉತ್ಪಾದಕರ ಸಂಸ್ಥೆಗಳನ್ನು ರಚಿಸಲು ಕ್ರಮವಹಿಸಲಾಗುತಿದೆ ಎಂದರು.

ತೋಟಗಾರಿಕೆ ಇಲಾಖೆಯಿಂದ ಪಿಕೆವಿವೈಯಡಿ ಎಫ್.ಪಿ.ಓಗಳನ್ನು ರಚಿಸಲು ಅನುಕೂಲವಾಗುವಂತೆ “ಫಾರ್ಮೇಷನ್ ಎಂಡ್ ಪ್ರಮೋಷನ್ ಆಫ್ 10,000 ಎಫ್.ಪಿ.ಓಸ್” ಯೋಜನೆಯಡಿ 11 ಎಫ್.ಪಿ.ಓಗಳನ್ನು ನಿಗದಿಪಡಿಸಲಾಗಿದ್ದು, ಸಣ್ಣ ರೈತರ ಕೃಷಿ ವ್ಯವಹಾರ ಒಕ್ಕೂಟ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ, ನಬಾರ್ಡ್ ಮತ್ತು ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ ಸಂಸ್ಥೆಗಳು ಅನುಷ್ಠಾನಗೊಳಿಸುತ್ತಿವೆ ಎಂದು ಬಿ.ಸಿ.ಪಾಟೀಲ್ ಸದನಕ್ಕೆ ವಿವರಿಸಿದರು.