ರೈತ ವಿರೋಧಿ ಹೇಳಿಕೆ ನೀಡಿಲ್ಲ

ಬೆಂಗಳೂರು, ಡಿ. ೨೫- ರೈತರ ವಿರೋಧವಾಗಿ ನಾನು ಯಾವುದೇ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಕೃಷಿ, ಎಪಿಎಂಸಿ, ಜವಳಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.
ವಿಜಯಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹತ್ತಿರದಲ್ಲಿರುವುದರಿಂದ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ. ನಾನು ರೈತರನ್ನು ಅಪಮಾನಿಸುವ ಯಾವುದೇ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದರು.
ನನಗೆ ಮದ ಏರಿದೆ ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ. ಇದು ಸರಿಯಲ್ಲ. ಬಿಜೆಪಿ ನಾಯಕರಿಗೆ ರೈತರ ಮೇಲೆ ಕರುಣೆ ಇದ್ದರೆ ಕೇಂದ್ರ ಸರ್ಕಾರದ ನೀತಿಗಳನ್ನು ಬದಲಿಸಿ ರೈತರಿಗೆ ಅನುಕೂಲ ಮಾಡಿಕೊಡಲಿ ಎಂದು ಶಿವಾನಂದ ಪಾಟೀಲ್ ಹೇಳಿದರು.
ನನ್ನ ಬಗ್ಗೆ ಕೆಟ್ಟದಾಗಿ ಟೀಕೆ ಮಾಡಿರುವ ವಿರೋಧ ಪಕ್ಷದ ನಾಯಕರು, ರೈತರ ಸಮಸ್ಯೆಗಳನ್ನು ಪ್ರಧಾನಿ ಮೋದಿ ಅವರು ಗಮನಕ್ಕೆ ತಂದು ಅವರ ಬೆಳೆಗಳಿಗೆ ಒಳ್ಳೆ ಬೆಲೆ ಸಿಗುವಂತೆ ನೋಡಿಕೊಳ್ಳಲಿ. ಅದು ಬಿಟ್ಟು ರಾಜಕೀಯ ಗಿಮಿಕ್ಕಿಗಾಗಿ ಏನೇನೋ ಮಾತನಾಡುವುದು ಸರಿಯಲ್ಲ ಎಂದರು.
ರೈತರ ಉತ್ಪನ್ನಗಳಿಗೆ ಮೂರು ವರ್ಷಕ್ಕೊಮ್ಮೆ ಒಳ್ಳೆ ಬೆಲೆ ಬರುತ್ತದೆ. ಉಳಿದ ಎರಡು ವರ್ಷ ಬೆಲೆ ಇಲ್ಲದೆ ರೈತರು ಸಂಕಷ್ಟದಲ್ಲಿರುತ್ತಾರೆ. ಆಗ ರೈತರು ಸಾಲಮನ್ನಾ ಆಗಲಿ ಎಂಬ ಆಶಯ ವ್ಯಕ್ತಪಡಿಸುತ್ತಾರೆ ಎಂದಷ್ಟೇ ನಾನು ಹೇಳಿದ್ದು, ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ನಾನು ರೈತ ಕುಟುಂಬದವನೇ. ರೈತರ ವಿರೋಧಿ ಅಲ್ಲ. ವಿಪಕ್ಷಗಳು ರಾಜಕೀಯಕ್ಕಾಗಿ ಏನೇನೋ ಆರೋಪ ಮಾಡುವುದು ಸರಿಯಲ್ಲ ಎಂದು ಶಿವಾನಂದ ಪಾಟೀಲ್ ಕಿಡಿಕಾರಿದರು.
ಇತ್ತೀಚೆಗೆ ಕೇಂದ್ರದ ಕೆಲ ಯೋಜನೆಗಳು ರೈತರಿಗೆ ಮುಳುವಾಗಿವೆ. ನನಗೆ ಮದ ಏರಿದೆ ಎಂದು ಹೇಳುವ ವಿಪಕ್ಷ ನಾಯಕರುಗಳು ರೈತರಿಗೆ ಮುಳುವಾಗಿರುವ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ಅವರ ಗಮನಕ್ಕೆ ತಂದು ಅವುಗಳನ್ನು ಬದಲಿಸಲಿ. ಆ ಕೆಲಸ ಆದರೆ ಬಿಜೆಪಿಯವರು ರೈತ ಪರ ಎಂದು ಹೇಳಬಹುದು. ಸುಮ್ಮನೆ ಬಾಯಿ ಮಾತಿನಲ್ಲಿ ರೈತಪರ ಎಂದರೇ ಹೇಗೆ ಎಂದು ಸಚಿವ ಶಿವಾನಂದ ಪಾಟೀಲ್, ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.