ರೈತ ವಿರೋಧಿ ಸರ್ಕಾರ: ಟೀಕೆ

ಧಾರವಾಡ,ಫೆ23 : ಬಿಜೆಪಿ ನೇತೃತ್ವದ ಸರ್ಕಾರ ರೈತ ವಿರೋಧಿಯಾಗಿದೆ. ಸಾಲ ಮರುಪಾವತಿಸುವಂತೆ ಬ್ಯಾಂಕ್‍ಗಳು ರೈತರಿಗೆ ನೋಟಿಸ್ ಕಳಿಸುತ್ತಿದ್ದು, ರಾಜ್ಯ ಸರಕಾರ ರೈತರ ಸಾಲ ಮನ್ನಾ ಮಾಡಲು ಮುಂದಾಗದಿರುವುದು ಖಂಡನೀಯ ಎಂದು ಜೆಡಿಎಸ್ ರಾಜ್ಯ ರೈತ ಘಟಕದ ಅಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಪರ ಎಂದು ಹೇಳಿಕೊಳ್ಳುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೃಷಿಕರನ್ನು ಕಡೆಗಣಿಸಿವೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಬಿಜೆಪಿ ಇದ್ದರು. ರೈತರಿಗೆ ಆಯವ್ಯಯದಲ್ಲಿ ಸಾಲ ಮನ್ನಾ ಮಾಡದೇ ನಿರ್ಲಕ್ಷಿಸಿವೆ. ಈಗ ಸಾಲ ಮರುಪಾವತಿಸುವಂತೆ ಬ್ಯಾಂಕ್‍ಗಳು ರೈತರಿಗೆ ನೋಟಿಸ್ ಕಳಿಸುತ್ತಿದ್ದು, ಇದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೂಡಲೇ ಸುತ್ತೋಲೆ ಹೊರಡಿಸಿ ರೈತರಿಗೆ ನೊಟೀಸ್ ನೀಡದಂತೆ ಬ್ಯಾಂಕ್‍ಗಳಿಗೆ ಸೂಚಿಸಬೇಕು ಎಂದರು.

ಕಳಪೆ ಅಕ್ಕಿ ವಿತರಣೆ: ಫೆಬ್ರವರಿಯಲ್ಲಿ ಧಾರವಾಡ ಜಿಲ್ಲೆಯ ವಿವಿಧೆಡೆ ಕಳಪೆ ಗುಣಮಟ್ಟದ ಪಡಿತರ ಅಕ್ಕಿ ವಿತರಿಸಲಾಗಿದೆ. ಫೆಬ್ರವರಿಯಲ್ಲಿ ತಲಾ 2 ಕೆ.ಜಿ. ಹೆಚ್ಚುವರಿ ಅಕ್ಕಿ ನೀಡಲಾಗುತ್ತದೆ ಎಂದು ಸರಕಾರ ಘೋಷಿಸಿದೆ. ಆದರೆ ಕಳಪೆ ಗುಣಮಟ್ಟದ ಅಕ್ಕಿ ನೀಡಿದ್ದರಿಂದ ಜನರು ಆಕ್ರೋಷಗೊಂಡಿದ್ದಾರೆ. ಅಕ್ಕಿಯ ಗುಣಮಟ್ಟದ ಕುರಿತು ಪರೀಕ್ಷೆ ನಡೆಸಬೇಕು. ಬಡ ಜನರು ಪಡಿತರ ಅಕ್ಕಿ ಬಳಕೆ ಮಾಡುತ್ತಿದ್ದು, ಅವರಿಗೆ ಉತ್ತಮ ಅಕ್ಕಿ ವಿತರಣೆ ಮಾಡದಿದ್ದರೆ ಜೆಡಿಎಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಜುನಾಥ ಹಗೇದಾರ, ಚಿದಂಬರ ನಾಡಗೌಡ ಇದ್ದರು.