ರೈತ ವಿರೋಧಿ ನೀತಿ ವಿರುದ್ಧ ಸಂಘಟಿತರಾಗಿ-ಡಿ.ಎಚ್ ಪೂಜಾರ್

ಮಾನ್ವಿ.ನ.08- ಬಡವರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ರೈತರಿಗೆ ಮಾರಕವಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ವಿರುದ್ಧ ಸಂಘಟಿತರಾಗಿ ಹೋರಾಟ ಮಾಡಬೇಕೆಂದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಹೆಚ್.ಪೂಜಾರ್ ಹೇಳಿದರು.
ಅವರು ಪಟ್ಟಣದ ಶಾಸಕರ ಭವನದಲ್ಲಿ ಕರ್ನಾಟಕ ರೈತ ಸಂಘ ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತ್ತಿದ್ದರು.ಆಳುವ ಸರ್ಕಾರಗಳು ಜಾರಿಗೆ ತಂದಿರುವ ಕೃಷಿ, ಭೂ ಸುಧಾರಣೆ ಮತ್ತು ಅಗತ್ಯ ವಸ್ತುಗಳ ಕಾಯ್ದೆ ಹಾಗೂ ಕಾರ್ಮಿಕ ತಿದ್ದುಪಡಿ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ಬಂಡವಾಳಶಾಹಿಗಳ ಪರವಾಗಿ ಕಾನೂನು ಜಾರಿಗೊಳಿಸುತ್ತಿರುವ ಸರ್ಕಾರಗಳು ಲೂಟಿಗೆ ಮುಂದಾಗಿವೆ ಎಂದು ಆರೋಪಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮಾತನಾಡಿ ರೈತರು ಬೆಳೆದ ಬೆಳೆಗಳಿಗೆ ನಿಗದಿತ ಬೆಲೆ ಇಲ್ಲದಂತಾಗಿದೆ. ಬೆಂಬಲ ಬೆಲೆಯಲ್ಲಿ ರೈತರ ಉತ್ಪನ್ನಗಳನ್ನು ಸರ್ಕಾರ ಖರೀದಿಗೆ ಮುಂದಾಗಬೇಕಾಗಿದೆ. ಹೊಸದಾಗಿ ಜಾರಿಗೆ ತಂದಿರುವ ಕಾನೂನುಗಳಿಂದಾಗಿ ಸರ್ಕಾರ ರೈತರನ್ನು ಕೃಷಿ ಕ್ಷೇತ್ರದಿಂದ ಹೊರಗುಳಿಯುವಂತೆ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೂ ಸುಧಾರಣೆ ಕಾಯ್ದೆ ಅಗತ್ಯ ವಸ್ತುಗಳ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಯನ್ನು ಸರ್ಕಾರಗಳು ಕೂಡಲೇ ಹಿಂಪಡೆಯಬೇಕು. ಭತ್ತ, ಹತ್ತಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಮಹಾ ಮೋಸಗಾರ ಆಗಿದ್ದಾರೆ. ಸುಳ್ಳು ಹೇಳುವುದೇ ಅವರ ಕಾಯಕವಾಗಿದೆ ಎಂದು ಲೇವಡಿ ಮಾಡಿದರು.ಹೈ-ಕ.ಹೋರಾಟ ಸಮಿತಿಯ ಸಂಚಾಲಕ ಡಾ. ರಝಾಕ್ ಉಸ್ತಾದ್ ವಿಚಾರ ಮಂಡಿಸಿದರು. ವೇದಿಕೆಯ ಮೇಲೆ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಅಶೋಕ ನಿಲೋಗಲ್,
ಪತ್ರಕರ್ತರಾದ ತಾಯಪ್ಪ ಬಿ ಹೊಸೂರು, ಪಿ.ಪರಮೇಶ, ಪದಾಧಿಕಾರಿಗಳಾದ ಪರಶುರಾಮ ಹಿರೇದಿನ್ನಿ, ರಮೇಶ್ ಪಾಟೀಲ್, ಉರುಕುಂದ ಉಪಸ್ಥಿತರಿದ್ದರು.