ರೈತ ವಿರೋಧಿ ಕೃಷಿ ಕಾಯ್ದೆ ವಿರೋಧಿಸಿ ರೈತರ ಆಗ್ರಹ ಜಾಥಾಗೆ ಚಾಲನೆ

ಬಳ್ಳಾರಿ, ಜ.06: ರೈತ ವಿರೋಧಿ ಕೃಷಿ ಕಾಯ್ದೆ ವಿರೋಧಿಸಿ ರೈತ ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾ ಸಮಿತಿ ಆಯೋಜಿಸಿರುವ ಮೂರು ದಿನಗಳ ರೈತರ ಆಗ್ರಹ ಜಾಥಾಗೆ ಚಾಲನೆ ನೀಡಲಾಗಿದೆ.
ತಾಲೂಕಿನ ಸಂಗನಕಲ್ಲು ಗ್ರಾಮದಲ್ಲಿ ರೈತರ ಆಗ್ರಹ ಜಾಥಾಕ್ಕೆ ಚಾಲನೆ ನೀಡಿದ ಎಸ್.ಯು.ಸಿ.ಐ (ಸಿ) ಜಿಲ್ಲಾ ಕಾರ್ಯದರ್ಶಿಗಳಾದ ಕಾ.ರಾಧಾಕೃಷ್ಣ ಉಪಾಧ್ಯ ಅವರು ಮಾತನಾಡುತ್ತಾ, “ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತಾಪಿ ವರ್ಗದ ಈ ಬೃಹತ್ ಧೀರೋದ್ಧಾತ್ತ ಹೋರಾಟಕ್ಕೆ ಆರ್.ಕೆ.ಎಸ್ (ಎಐಕೆಕೆಎಂಎಸ್) ಸಂಪೂರ್ಣ ಬೆಂಬಲ ನೀಡುತ್ತಿದೆ. ಈಗಾಗಲೆ ಈ ಕರಾಳ ಕಾಯ್ದೆಗಳಿಂದಾಗುವ ದುಷ್ಪರಿಣಾಮಗಳನ್ನು ಕುರಿತು ಅನೇಕ ಸಾಮಾಜಿಕ ಕಾಳಜಿವುಳ್ಳ ಖ್ಯಾತ ಚಿಂತಕರನ್ನು ಆಹ್ವಾನಿಸಿ ಚರ್ಚಾ ಗೋಷ್ಠಿಗಳನ್ನು ಸಂಘಟಿಸಲಾಗಿದೆ. ಜಿಲ್ಲೆಯ ಅನೇಕ ಹಳ್ಳಿಗಳಿಗೆ ತೆರಳಿ ರೈತರ ಪ್ರತಿಭಟನಾ ಸಭೆಗಳನ್ನು ಸಂಘಟಿಸಲಾಗಿದೆ. ನೂರಾರು ರೈತ ಸಂಘಟನೆಗಳುಳ್ಳ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‍ಸಿಸಿ) ನೇತೃತ್ವ ಹೋರಾಟಗಳಲ್ಲೂ ಆರ್.ಕೆ.ಎಸ್ (ಎಐಕೆಕೆಎಂಎಸ್) ಸಕ್ರಿಯ ಪಾತ್ರ ವಹಿಸುತ್ತಿದೆ. ಆರ್.ಕೆ.ಎಸ್ (ಎಐಕೆಕೆಎಂಎಸ್) ರಾಜ್ಯ ನಾಯಕರು ದೆಹಲಿಯ ಪ್ರತಿಭಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿ ಹೋರಾಟದಲ್ಲಿ ಸಂಫೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ನಮ್ಮ ಸಂಘಟನೆಯ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಂಘಟನಾಕಾರರು ಈ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕರ್ನಾಟಕದಲ್ಲೂ ರೈತ ಹೋರಾಟ ತೀವ್ರಗೊಳಿಸಬೇಕೆಂದು ಕರೆ ನೀಡುತ್ತಾ, ರಾಜ್ಯದ ಜನತೆ ಈ ಹೋರಾಟದಲ್ಲಿ ಕೈ ಜೋಡಿಸಬೇಕೆಂದು” ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ಆರ್.ಕೆ.ಎಸ್‍ನ ಜಿಲ್ಲಾ ಕಾರ್ಯದರ್ಶಿಗಳಾದ ಹನುಮಂತಪ್ಪನವರು ವಹಿಸಿದ್ದರು. ಈ ಜಾಥಾದಲ್ಲಿ ನಾಯಕರಾದ ಗೋವಿಂದ್, ಬಸಣ್ಣ, ಪಂಪಾಪತಿ, ಎಐಡಿಎಸ್‍ಓ, ಎಐಡಿವೈಓ, ಎಐಎಂಎಸ್‍ಎಸ್ ನಾಯಕರುಗಳು, ಕಾರ್ಯಕರ್ತರು ಸಹ ಜಾಥಾ ಬೆಂಬಲಿಸಿ ಪಾಲ್ಗೊಂಡಿದ್ದರು. ಹಳ್ಳಿಗಲ್ಲೂ ಸಂಘಟನೆಯ ಅನೇಕ ಬೆಂಬಲಿಗರು ಪಾಲ್ಗೊಂಡಿದ್ದರು.