ರೈತ ವಿರೋಧಿ ಕಾಯ್ದೆ ರಾಜ್ಯಾದ್ಯಂತ ಜನಜಾಗೃತಿ

ಬೆಂಗಳೂರು, ಜ.೮-ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತ ವಿರೋಧಿ ಕಾಯ್ದೆಗಳ ದುಷ್ಪರಿಣಾಮಗಳ ಬಗ್ಗೆ ರಾಜ್ಯವ್ಯಾಪಿ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಸಿರು ಸೇನೆ ವೀರಸಂಗಯ್ಯ ತಿಳಿಸಿದರು.

ನಗರದಲ್ಲಿಂದು ಶಿವಾಜಿನಗರದ ಡಬ್ಲ್ಯೂ ಪಿಐ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃಷಿ ಕಾಯ್ದೆಗಳ ಕುರಿತ ಜಾಗೃತಿ ಭಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕೃಷಿಯು ಅನೇಕ ಬಿಕ್ಕಟ್ಟು ಗಳನ್ನು ಎದರುಸುತ್ತಿದೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ನಿಗದಿತ ಬೆಲೆ ಮತ್ತು ಮಾರುಕಟ್ಟೆ ಇಲ್ಲ. ನೀರಾವರಿ ಸೌಲಭ್ಯ, ಬಿತ್ತನೆ ಬೀಜ, ರಸಗೊಬ್ಬರ, ವಿದ್ಯುತ್ ಪೂರೈಕೆ, ದಾಸ್ತಾನು ಕೊಠಡಿ, ಸಾಲ ಸೌಲಭ್ಯ, ತಂತ್ರಜ್ಞಾನ ಗಳು ಸರಿಯಾಗಿ ಸಿಗದ ಪರಿಣಾಮ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ ಎಂದರು.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಮಾತನಾಡಿ, ಅಸಂಖ್ಯಾತ ರೈತ ಮತ್ತು ಕೃಷಿ ಕೂಲಿಕಾರರು ಕೃಷಿಯಿಂದ ದೂರವಾಗಿ ಹೊಟ್ಟೆಪಾಡಿಗಾಗಿ ಹಳ್ಳಿಯಿಂದ ನಗರಗಳಿಗೆ ವಲಸೆ ಹೊರಡುತ್ತಿದ್ದಾರೆ. ಇದರ ಬಗ್ಗೆ ಗಮನ ಹರಿಸಬೇಕಾದ ನಮ್ಮ ಸರ್ಕಾರಗಳು ತಮ್ಮ ಜವಾಬ್ದಾರಿಯನ್ನು ಮರೆತಿವೆ ಎಂದು ದೂರಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳು ಮೂರು ಮಹತ್ವದ ರೈತ ಮತ್ತು ಜನ ವಿರೋಧಿ ಕಾಯಿದೆಗಳನ್ನು ಜಾರಿ ಮಾಡಲು ಹೊರಟಿದೆ. ಈ ಕಾಯಿದೆಗಳು ಜಾರಿಯಾದರೆ ದೇಶದ ಕೃಷಿ ದಿವಾಳಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ತಿದ್ದುಪಡಿಗೆ ಒಳಗಾದ ಮೂರು ಕಾಯಿದೆಗಳಾದ ಭೂ ಸುಧಾರಣೆ ತಿದ್ದುಪಡಿ ಕಾಯಿದೆ, ಕೃಷಿ ಉತ್ಪನ್ನ ಮತ್ತು ಸರಕು ಸೇವೆಗಳ ಮಾರಾಟ ಕಾಯ್ದೆ ಮತ್ತು ವಿದ್ಯುಚ್ಛಕ್ತಿ ತಿದ್ದುಪಡಿ ಕಾಯಿದೆಗಳು ರೈತರಿಗೆ ಮಾರಕವಾಗಿ ಕೃಷಿಯನ್ನು ನಾಶಗೊಳಿಸಿ ಅಂಬಾನಿ, ಆದಾನಿ ಸೇರಿದಂತೆ ಇತರ ಕಾರ್ಪೊರೇಟ್ ಸಂಸ್ಥೆಗಳ ಮುಖ್ಯಸ್ಥರಿಗೆ ಕೃಷಿಯನ್ನು ಒಪ್ಪಿಸಲಿವೆ.

ಕಾರ್ಪೊರೇಟ್ ಮತ್ತು ಬಂಡವಾಳಶಾಹಿಯ ಪರ ಇರುವ ರೈತ ಮತ್ತು ಜನ ವಿರೋಧಿ ಮೋದಿ ನೇತೃತ್ವದ ಭಾಜಪ ಸರ್ಕಾರ ಬಂಡವಾಳಶಾಹಿಗಳ ಹಿತ ಕಾಯಲು ಮುಂದಾಗಿದೆ. ಇಂತಹ ಸೂಕ್ಷ್ಮತೆ ಯನ್ನು ಅರಿತುಕೊಂಡು ನಾವುಗಳು ಅನ್ನದಾತರ ಜೊತೆಗೆ ನಿಲ್ಲಬೇಕಿದೆ ಹಾಗೂ ರೈತ, ಕಾರ್ಮಿಕ, ದಲಿತ, ಅಲ್ಪಸಂಖ್ಯಾತ, ಮಹಿಳಾ ಮತ್ತು ಜನ ವಿರೋಧಿ ಸರ್ಕಾರಕ್ಕೆ ತಕ್ಕದಾದ ಪಾಠ ಕಲಿಸಿ ದೇಶವನ್ನು ಉಳಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹಬೀಬುಲ್ಲಾ ಖಾನ್, ತಲತ್ ಯಾಸ್ಮಿನ್, ತಾಜುದ್ದೀನ್ ಶರೀಫ್ , ಅಜೀಜ್ ಜಾಗಿರ್ದಾರ್ ಸೇರಿದಂತೆ ಪ್ರಮುಖರಿದ್ದರು.